

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ವೇಗವಾಗಿ ಹರಡುತ್ತಿದ್ದು, ಆಡಳಿತ ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕಾಗಿರುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಪೂರಕ ಚರ್ಚೆಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸರ್ವಪಕ್ಷ ಸಭೆ ಕರೆಯುವಂತೆ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ರಮಾನಾಥ ರೈ ಸಲಹೆ ನೀಡಿದ್ದಾರೆ.
ಕೋವಿಡ್ ನಿಯಂತ್ರಿಸಲು ಸರ್ಕಾರ ಹೊರಡಿಸುವ ಮಾರ್ಗಸೂಚಿ ಸಂಬಂಧಿಸಿ ಜಿಲ್ಲಾಧಿಕಾರಿ ಸಹಿತ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ನಿಯಮ ರೂಪಿಸುವವರಿಂದಲೇ ಉಲ್ಲಂಘನೆ ನಡೆಯುತ್ತಿದೆ. ಜನಸಾಮಾನ್ಯರ ಓಡಾಟಕ್ಕೆ ಮಾತ್ರ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.
ಕಾಂಗ್ರೆಸ್ ಮುಳುಗುವ ಹಡಗು ಎಂಬ ಬಿಜೆಪಿ ನಾಯಕರೊಬ್ಬರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡಿದವರ ಅಜ್ಜಪಿಜ್ಜಂದಿರು ಆ ಹಡಗಿನಲ್ಲಿಯೇ ಕುಳಿತು ಇಲ್ಲಿಯವರೆಗೆ ಬಂದಿರಬಹುದು. ಅವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತೆ ಬೇಡ. ಅವರ ಪಕ್ಷದಲ್ಲಿ ಹೆಗ್ಗಣ ಸತ್ತು ವಾಸನೆ ಬರುತ್ತಿದೆ. ಅದರ ಬಗ್ಗೆ ಯೋಚಿಸಲಿ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ನಾಯಕರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ನವೀನ್ ಡಿಸೋಜ, ಟಿ.ಕೆ. ಸುಧೀರ್, ಹರಿನಾಥ್, ಪೃಥ್ವಿರಾಜ್, ಅಪ್ಪಿ, ನೀರಜ್‌ಪಾಲ್, ಭಾಸ್ಕರ್ ಮೊಯ್ಲಿ ಸುದ್ದಿಗೋಷ್ಠಿಯಲ್ಲಿದ್ದರು.
ಸಿ.ಟಿ. ರವಿ ಕುಲಗೋತ್ರ ಗೊತ್ತಿಲ್ಲದ ಮನುಷ್ಯ: ನಾಯಕರೆಂದರೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಎಂಬ ಸಿ.ಟಿ. ರವಿ ಹೇಳಿಕೆಗೆ ಮಾಜಿ ಸಚಿವ ರಮಾನಾಥ ರೈ ತಿರುಗೇಟು ನೀಡಿದ್ದಾರೆ. ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷರಾಗಿದ್ದಾಗ ಮಿತ್ರಪಕ್ಷಗಳು ಒತ್ತಾಯಿಸಿದರೂ ತಮಗೆ ಒಲಿದು ಬಂದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿದರು. ದೇಶಕ್ಕಾಗಿ ರಾಜೀವ್, ಇಂದಿರಾ ಗಾಂಧಿ ಪ್ರಾಣ ತ್ಯಾಗ ಮಾಡಿದರು. ಅವರ ಪೀಳಿಗೆಯವರು ರಾಹುಲ್ ಗಾಂಧಿ. ಆದರೆ ಸಿ.ಟಿ ರವಿ ಕುಲಗೋತ್ರ ಗೊತ್ತಿಲ್ಲದ ಮನುಷ್ಯ ಎಂದು ಹೇಳಿದರು.