ಕಾಂಗ್ರೆಸ್‌ನಿಂದ ಪರಿಶಿಷ್ಟರಿಗೆ ಅನ್ಯಾಯ, ಎಸ್‌ಸಿ-ಎಸ್‌ಟಿ ಅನುದಾನ ದುರ್ಬಳಕೆ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ

BJP PROTEST SCP-TSP
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು. ಸಂಸದ ರಮೇಶ ಜಿಗಜಿಣಗಿ, ಅರುಣ ಶಹಾಪುರ, ವಿಜುಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅನುದಾನ ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಮಹಾತ್ಮ ಗಾಂಧಿ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಮೆರವಣಿಗೆ ನಡೆಸಿದ ಬಿಜೆಪಿ ಪದಾಧಿಕಾರಿಗಳು ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಕಲಬುರಗಿ ಮಾಜಿ ಸಂಸದ ಉಮೇಶ ಜಾಧವ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಬಲೀಕರಣ, ಶಿಕ್ಷಣ, ಉದ್ಯೋಗ, ಸ್ವಾವಲಂಬನೆ ಮೂಲಕ ಪ್ರತಿ ಕುಟುಂಬ ಸಶಕ್ತಗೊಳಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೇ, ದಲಿತ ಕೇರಿ, ಕಾಲನಿಗಳಿಗೆ ಮೂಲ ಸೌಕರ್ಯ ಒದಗಿಸಲು, ಭೂ ಒಡೆತನ, ಭೂಮಿಗೆ ನೀರು, ಸ್ವ ಉದ್ಯೋಗ ಹೀಗೆ ಮುಂತಾದ ಕಾರ್ಯಕ್ರಮಗಳಿಗೆ ಅನುದಾನ ಮೀಸಲಿಡಬೇಕಿದ್ದು, ರಾಜ್ಯ ಸರ್ಕಾರ ಆ ಅನುದಾನ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

2023 ರಲ್ಲಿ ಎಸ್‌ಸಿಪಿಯಿಂದ ರೂ.7,713.15 ಸಾವಿರ ಕೋಟಿ, ಟಿಎಸ್‌ಪಿ ಯಿಂದ ರೂ.3,430.85 ಸಾವಿರ ಕೋಟಿ ಸೇರಿ ರೂ.11,144 ಸಾವಿರ ಕೋಟಿ ಹಾಗೂ 2024 ರಲ್ಲಿ ಎಸ್‌ಸಿಪಿ ಯಿಂದ ರೂ.9,980.66 ಸಾವಿರ ಕೋಟಿ, ಟಿಎಸ್‌ಪಿ ಯಿಂದ ರೂ.4,302.02 ಸಾವಿರ ಕೋಟಿ ಸೇರಿ ರೂ.14,282.68 ಸಾವಿರ ಕೋಟಿಯಂತೆ ಕಳೆದ ಎರಡು ವರ್ಷದಲ್ಲಿ 25,426.68 ಕೋಟಿ ಅನುದಾನವನ್ನು ಸರ್ಕಾರ ಗ್ಯಾರಂಟಿಗೆ ಬಳಸಿಕೊಳ್ಳುವ ಈ ಮೂಲಕ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಕ್ಕೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.

ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಕೇವಲ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರವಿಲ್ಲ. ಸವರ್ಣೀಯರು, ಹಿಂದುಳಿದವರು, ಅಲ್ಪಸಂಖ್ಯಾತರು ಒಳಗೊಂಡಿದ್ದಾರೆ. ಅವರೆಲ್ಲರಿಗೂ ದಲಿತರಿಗೆ ಮೀಸಲಿಟ್ಟ ಅನುದಾನ ಕೊಡುವುದು ನ್ಯಾಯವಲ್ಲ. ಬಜೆಟ್‌ದಲ್ಲಿ ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ಮೀಸಲಿಡುವ ಕಾಂಗ್ರೆಸ್ ಸರ್ಕಾರ, ಆ ಹಣವನ್ನೇಕೆ ಗ್ಯಾರಂಟಿಗೆ ಬಳಸುವುದಿಲ್ಲ ಎಂದು ಪ್ರಶ್ನಿಸಿದರು. ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಶಂಕರಗೌಡ ಪಾಟೀಲ, ಉಮೇಶ ಕೋಳಕೂರ, ವಿವೇಕಾನಂದ ಡಬ್ಬಿ, ಬಳ್ಳಾರಿ ಹನುಮಂತಪ್ಪ, ರಾಮಣ್ಣ ಬಲ್ಲಾಹಣ್ಸಿ, ವಿಜುಗೌಡ ಪಾಟೀಲ, ಗೋಪಾಲ ಘಟಕಾಂಬಳೆ, ಕಾಸುಗೌಡ ಬಿರಾದಾರ, ಉಮೇಶ ಕಾರಜೋಳ, ಸಂಜೀವ ಐಹೊಳೆ, ರವಿ ಒಗ್ಗೆ, ಮಂಜುನಾಥ ಮೀಸೆ, ಸಾಬು ಮಾಶಾಳ, ಚಿದಾನಂದ ಚಲವಾದಿ, ವಿಜಯ ಜೋಶಿ, ಶ್ರೀಧರ ಬಿಜ್ಜರಗಿ, ಭರತ ಕೋಳಿ, ಭೀಮಾಶಂಕರ ಹದನೂರ ಮತ್ತಿತರರಿದ್ದರು.

ಕಳೆದ ಬಜೆಟ್‌ನಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನೇ ಸಮರ್ಪಕವಾಗಿ ಬಳಸಿಲ್ಲ. ಘೋಷಿಸಿದಷ್ಟು ಅನುದಾನ ಬಳಕೆ ಮಾಡದೇ ದಲಿತರಿಗೆ ಅನ್ಯಾಯ ಮಾಡಿದೆ. ನಮ್ಮಂಥ ದಲಿತರು ಯಾವುದೇ ಕಾರಣಕ್ಕೂ ಈ ಧೋರಣೆ ಸಹಿಸಲ್ಲ. ಈ ಬಜೆಟ್‌ನಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಅನುದಾನ ಮೀಸಲಿಡಬೇಕು. ದಲಿತರಿಗೆ ಅನ್ಯಾಯ ಮಾಡಬಾರದು. - ರವಿ ವಗ್ಗೆ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net