ಕಾಂಗ್ರೆಸ್‌ನಿಂದ ದಲಿತರಿಗೆ ಅನ್ಯಾಯ, ಎಸ್‌ಸಿಪಿ-ಟಿಎಸ್‌ಪಿ ಅನುದಾನ ದುರ್ಬಳಕೆ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ

SCP TSP BJP PROTEST
ವಿಜಯಪುರ ನಗರದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಹೇಂದ್ರಕುಮಾರ ನಾಯಕ, ಎಸ್.ಎ. ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ ಎಸ್‌ಸಿಪಿ-ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿರುವ ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರಲ್ಲದೇ ಬಂಜಾರಾ ಅಭಿವೃದ್ಧಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದರು.

ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತಲ್ಲದೇ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್‌ಸಿಪಿ-ಟಿಎಸ್‌ಪಿ ಅನುದಾನಕ್ಕೆ ಕತ್ತರಿ ಹಾಕಿದೆ. ಆ ಮೂಲಕ ದಲಿತ ವರ್ಗದ ಜನರಿಗೆ ಬಹುದೊಡ್ಡ ಅನ್ಯಾಯ ಮಾಡುತ್ತಿದೆ. 2023 ರಲ್ಲಿ ಎಸ್‌ಸಿಪಿ ಅಡಿಯಲ್ಲಿ 7713.15 ಕೋಟಿ ರೂ. ಹಾಗೂ ಟಿಎಸ್‌ಪಿ ಅಡಿ 3430.85 ಕೋಟಿ ರೂ. ಸೇರಿದಂತೆ ಒಟ್ಟು 11144 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದು ಅನ್ಯಾಯವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.

ಅಲ್ಲದೇ 2024ರಲ್ಲಿಯೂ ಎಸ್‌ಸಿಪಿ ಅನುದಾನಡಿಯಲ್ಲಿ 9980.66 ಕೋಟಿ ರೂ. ಹಾಗೂ ಟಿಎಸ್‌ಪಿ ಅನುದಾನಡಿಯಲ್ಲಿ 4302 ಕೋಟಿ ರೂ. ಸೇರಿದಂತೆ ಒಟ್ಟು 14282.68 ಕೋಟಿ ರೂ. ಬಳಕೆ ಮಾಡಿಕೊಂಡು ಮತ್ತೊಮ್ಮೆ ಘೋರ ಅನ್ಯಾಯವೆಸಗಿದೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ರಾಜ್ಯ ಸರ್ಕಾರ ದಲಿತ ಬಾಂಧವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಕೇವಲ ಮಾತಿನಲ್ಲಿ ದಲಿತಪರ ಎಂದು ಹೇಳುತ್ತಿದೆ ಹೊರತು ದಲಿತ ಸಮುದಾಯಗಳ ಅಭಿವೃದ್ಧಿ ಯೋಜನೆಯ ಹಣವನ್ನು ದುರುಪಯೋಗಮಾಡಿ ದಲಿತ ವಿರೋಧಿ ಎಂಬುದನ್ನು ಕಾಂಗ್ರೆಸ್ ಸಾಬೀತುಪಡಿಸಿದೆ ಎಂದು ದೂರಿದರು.

ಅಲ್ಪಸಂಖ್ಯಾತರಿಗೆ ಪ್ರತ್ಯೇಕವಾದ ಅನುದಾನವನ್ನು ಕಾಯ್ದಿರಿಸಲಾಗಿದೆ, ಈ ಪಂಚ ಗ್ಯಾರಂಟಿ ಯೋಜನೆಗಳಿಗೆ ಈ ಅನುದಾನ ಬಳಕೆ ಮಾಡುತ್ತಿಲ್ಲ, ಆದರೆ ದಲಿತ ಬಾಂಧವರಿಗೆ ಗ್ಯಾರಂಟಿ ಯೋಜನೆಗಳಿಗೆ ನೀಡುವಾಗ ದಲಿತರ ಶ್ರೇಯೋಭಿವೃದ್ಧಿಗಾಗಿ ಇರಿಸಿದ ಅನುದಾನ ಬಳಕೆ ಮಾಡುತ್ತಿದೆ ಇದು ಯಾವ ಸೀಮೆಯ ನ್ಯಾಯ? ಎಂದು ಅಂಗಡಿ ಖಾರವಾಗಿ ಪ್ರಶ್ನಿಸಿದರು.

ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಮುಖಂಡರಾದ ಮಹೇಂದ್ರಕುಮಾರ ನಾಯಕ, ರವಿ ವಗ್ಗೆ, ಮಂಜುನಾಥ ಮೀಸೆ, ಭರತ ಕೋಳಿ, ಎಸ್.ಎ. ಪಾಟೀಲ, ಶಿಲ್ಪಾ ಕುದರಗುಂಡ, ಬಸವರಾಜ ಬೈಚಬಾಳ, ಉಮೇಶ ಕೋಳಕೂರ, ಸಾಬು ಮಾಶ್ಯಾಳ, ಶ್ರೀಹರಿ ಗೊಳಸಂಗಿ, ಸಂಜಯಪಾಟೀಲ್ ಕನಮಡಿ, ವಿಜಯ ಜೋಶಿ, ವಿಕಾಸ್ ಪದಕಿ, ಮಲ್ಲಿಕಾರ್ಜುನ ದೇವರಮನಿ, ಗುರು ತಳವಾರ, ಸಿದ್ದು ಮಖಣಾಪೂರ, ಮಲ್ಲಮ್ಮ ಜೋಗೂರ, ರಾಜಕುಮಾರ ಸಗಾಯಿ, ಅಶೋಕ ರಾಠೋಡ, ವಿನೋದಕುಮಾರ ಮಣೂರ, ಪ್ರಶಾಂತ ಪವಾರ, ವಿನೋದ ಕೋಳೂರ, ಶರತಸಿಂಗ್ ರಜಪೂತ, ವಿನಯ ಬಬಲೇಶ್ವರ, ಶೀಲವಂತ ಉಮರಾಣಿ, ರಾಜೇಶ ತಾವಸೆ, ಮಂಜುಳಾ, ನಾಗರಾಜ ಪಾಟೀಲ, ಕಾಂತು ಶಿಂಧೆ, ಸಂದೀಪ್ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net