ಸಂವಿಧಾನದ ಬಗ್ಗೆ ಕಾಂಗ್ರೆಸ್​ನದು ಕಪಟ ನಾಟಕ: ಬಿ.ವೈ. ವಿಜಯೇಂದ್ರ ಕಟು ಟೀಕೆ | Constitution

Constitution
Published on

ಬೆಂಗಳೂರು: ಸಂವಿಧಾನ(Constitution) ಪ್ರತಿಪಾದಕರು, ರಕ್ಷಕರು ತಾವೇ ಎಂದು ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ್ದು ಕಪಟ ನಾಟಕವಾಗಿದೆ. ಅಧಿಕಾರದ ಅವಧಿಯುದ್ದಕ್ಕೂ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡದ್ದು ವಾಸ್ತವಿಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಟುವಾಗಿ ಟೀಕಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ (ನ.26) ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಸಂಪೂರ್ಣ ಗೌರವ ನೀಡಲು ಪ್ರಧಾನಿ ನರೇಂದ್ರ ಮೋದಿ ಪ್ರಾಮಾಣಿಕವಾಗಿ ಪ್ರಯತ್ನಿಸಿದವರು ಎಂದು ಹೇಳಿದರು.

ಸಂವಿಧಾನ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಧರ್ಮಗ್ರಂಥವಾಗಿದೆ. ವಿಶ್ವಕ್ಕೆ ಮಾದರಿಯಾದ ಸಂವಿಧಾನ ನಮ್ನದು ಎಂಬ ಹೆಮ್ಮೆ, ಸಂವಿಧಾನಕ್ಕೆ ಗೌರವ ಮತ್ತು ರಕ್ಷಣೆ ನೀಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು‌.

ಅಪಪ್ರಚಾರದ ಬಗ್ಗೆ ಜಾಗೃತಿ

ಸಂವಿಧಾನದ ಮಹತ್ವ, ಆಶಯ, ಡಾ.ಅಂಬೇಡ್ಕರ್ ಪರಿಶ್ರಮದ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಸಂವಿಧಾನ ಸನ್ಮಾನ ಅಭಿಯಾನ ಎರಡು ತಿಂಗಳ ಕಾಲ ನಡೆಯಲಿದೆ. ನ.26 ರಿಂದ ಜ.26ರವರೆಗೆ ನಡೆಯುವ ಈ ಅಭಿಯಾನ ಜಿಲ್ಲಾ ಮತ್ತು ಮಹಾಶಕ್ತಿ ಕೇಂದ್ರಮಟ್ಟಕ್ಕೂ ತಲುಪಬೇಕು.

ಕಾಂಗ್ರೆಸ್​ನಿಂದ ಸಂವಿಧಾನ ದುರ್ಬಳಕೆ ಬಗ್ಗೆ ಮಾಹಿತಿ ನೀಡಿ, ನಿಜವಾದ ಸಂವಿಧಾನ ವಿರೋಧಿಗಳು ಯಾರು ಎಂಬುದನ್ನು ಜನರಿಗೆ ತಿಳಿಸಿ, ಬಿಜೆಪಿ ಬಗೆಗಿನ ಅಪಪ್ರಚಾರ ತೊಡೆದು ಹಾಕಬೇಕು ಎಂದು ಸಲಹೆ ನೀಡಿದ ವಿಜಯೇಂದ್ರ, ಕರ್ನಾಟಕ ಕೈಗೆತ್ತಿಕೊಂಡ ಈ ಅಭಿಯಾನವನ್ನು ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಇಡೀ ದೇಶಕ್ಕೆ ವಿಸ್ತರಿಸಿರುವುದು ಸಂತಸ ತಂದಿದೆ ಎಂದರು.

ಕಾಂಗ್ರೆಸ್ ನೈಜ ವಿರೋಧಿ

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಸಂವಿಧಾನ, ಸಾಮಾಜಿಕ ನ್ಯಾಯದ ನೈಜ ವಿರೋಧಿ ಕಾಂಗ್ರೆಸ್ ಪಕ್ಷವಾಗಿದೆ. ಆದರೆ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಪ್ರಧಾನಿ ಮೋದಿಯವರು ಯಾವುದೇ ಕಾರಣಕ್ಮೂ ಸಂವಿಧಾನ ಬದಲಾವಣೆ ಅಸಾಧ್ಯವೆಂದು ಸ್ಪಷ್ಟಪಡಿಸಿ ಸಂದೇಹ ನಿವಾರಿಸುವ ಜತೆಗೆ ಅಪಪ್ರಚಾರ ನಡೆಸುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಡಾ.ಅಂಬೇಡ್ಕರ್ ಅವರು ಸಂವಿಧಾನದ 370ನೇ ವಿಧಿ ವಿರೋಧಿಸಿದರೂ ಕಾಂಗ್ರೆಸ್ ಹಿಂಪಡೆಯಲಿಲ್ಲ. ಅಷ್ಟೇ ಅಲ್ಲ, ಇಂದಿರಾಗಾಂಧಿಯವರು ತಮ್ಮ ಸ್ವಾರ್ಥ, ಅಧಿಕಾರದ ಲಾಲಸೆಗೆ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿ, ಎರಡು ವರ್ಷಗಳ ಕಾಲ ಸಂವಿಧಾನವನ್ನೇ ತಟಸ್ಥಗೊಳಿಸಿದರು. ಸರ್ವರಿಗೂ ಸಮಾನ ಅವಕಾಶ, ಎಲ್ಲರನ್ನೂ ಒಗ್ಗೂಡಿಸುವ ಧರ್ಮಗ್ರಂಥವೇ ಸಂವಿಧಾನ ಎಂದು ಛಲವಾದಿ ಹೇಳಿದರು.

ಶೂನ್ಯ ಧೋರಣೆ

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಸಂವಿಧಾನ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ್ದು ಶೂನ್ಯ ಧೋರಣೆಯಾಗಿದೆ. ರಾಹುಲ್ ಗಾಂಧಿಯವರು ಖಾಲಿ ಹಾಳೆಯಿರುವ ಸಂವಿಧಾನ ಪುಸ್ತಕ ಹಿಡಿದು ಓಡಾಡುತ್ತಾರಲ್ಲ, ಅದೇ ಮನಸ್ಥಿತಿ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದು ವಾಗ್ದಾಳಿ ಮಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಕಾಂಗ್ರೆಸ್ ಪಕ್ಷದ್ದು ಸದಾ ತಿರಸ್ಕಾರ ಮನೋಭಾವ. ತುರ್ತು ಪರಿಸ್ಥಿತಿ ಮೇಲ್ನೋಟದ ನಿದರ್ಶನ. ಸಂವಿಧಾನದ ಮೂಲ ಸಂರಚನೆಯನ್ನೇ ತಿರುಚಲು ಮುಂದಾದಾಗ, ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಹೊರಟಾಗ ಸುಪ್ರೀಂ ಕೋರ್ಟ್ ತಡೆಯೊಡ್ಡಿತು ಎಂದು ಬೊಮ್ಮಾಯಿ ನೆನಪಿಸಿದರು.

ಶಾಸಕರಾದ ಎನ್.ರವಿಕುಮಾರ್, ಬಿ.ಜಿ.ಪಾಟೀಲ್, ಬಸವರಾಜ ಮತ್ತಿಮೂಡ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಕ್ಯಾ.ಗಣೇಶ್ ಕಾರ್ಣಿಕ್, ಉಮೇಶ ಕಾರಜೋಳ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಸೇರು ಇತತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net