ಜಗನ್‌ಮೋಹನ್ ರೆಡ್ಡಿಯಂತೆ ಕಾಂಗ್ರೆಸ್ ಮನೆಗೆ: ಜಿಟಿಡಿ

mysore
Published on

ಮೈಸೂರು: ಆಂಧ್ರಪ್ರದೇಶದಲ್ಲಿ ಉಚಿತವಾಗಿ ಅನೇಕ ಕೊಡುಗೆಯನ್ನು ಕೊಟ್ಟ ಜಗನ್‌ಮೋಹನ್ ರೆಡ್ಡಿಯಂತೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವನ್ನು ಜನರು ಮನೆಗೆ ಕಳುಹಿಸುತ್ತಾರೆ ಎಂದು ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಗುಡುಗಿದರು.

ಆಲನಹಳ್ಳಿಯಲ್ಲಿರುವ ಕುದೇರು ಮಠದ ಶಾಖೆಯಾದ ತೋಂಟದಾರ್ಯ ಸ್ವಾಮೀಜಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಗುರುಮಲ್ಲೇಶ್ವರರ, ಶ್ರೀ ಗುರುಲಿಂಗ ಸ್ವಾಮೀಜಿಯವರ ಗಣರಾಧನೆ, ಪ್ರಾರ್ಥನಾ ಮಂದಿರ ಉದ್ಘಾಟನೆ, ಶ್ರೀ ಗುರುಶಾಂತ ಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರಂಟಿ ಕಾರ್ಯಕ್ರಮದಿಂದ ಕಾಂಗ್ರೆಸ್ 136 ಸ್ಥಾನ ಗೆದ್ದುಕೊಂಡಿತು. 13 ತಿಂಗಳ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನ ಗಳಿಸಲು ಮಾತ್ರ ಸಾಧ್ಯವಾಗಿದೆ. ಈ ಮೂಲಕ ಗ್ಯಾರಂಟಿ ಯೋಜನೆಗಳು ಮುಖ್ಯವಲ್ಲ, ದೇಶ ಮುಖ್ಯ ಎಂಬುದನ್ನು ರಾಜ್ಯ ಜನರು ಸಾಬೀತು ಪಡಿಸಿದ್ದಾರೆ ಎಂದು ಹೇಳಿದರು.

ಬಸವಣ್ಣನವರು ಕಾಯಕ ಮಾಡಿ ಊಟ ಮಾಡಿ ಎಂದಿದ್ದಾರೆ. ಕಾಯಕ ಮಾಡದೆ ಉಚಿತವಾಗಿ ಪಡೆದುಕೊಳ್ಳುವುದು ಧರ್ಮವಲ್ಲ, ಅದನ್ನು ಬಸವಣ್ಣನವರು ಸಹ ಒಪ್ಪವುದಿಲ್ಲ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲಿಲ್ಲ ಎಂಬ ಕೊರಗು ಇದೆ. ಅವರು ಎಷ್ಟು ಬೆಳೆಯಬೇಕಿತ್ತೋ ಅಷ್ಟು ಬೆಳೆಯಲಾಗಲಿಲ್ಲ. ಆದರೆ, ಅವರ ಪುತ್ರ ಬಿ.ವೈ.ವಿಜಯೇಂದ್ರರಿಗೆ ಉಜ್ವಲ ಭವಿಷ್ಯ ಇದೆ. ಚಿಕ್ಕವಯಸ್ಸಿನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ ಎಂದರು.

ಧರ್ಮ ಮುಖ್ಯ: ಡಾ.ಯತೀಂದ್ರ

ಸಮಾಜಕ್ಕೆ ಮಾರ್ಗದರ್ಶನ ಮಾಡಲು ಧರ್ಮ ಮುಖ್ಯ ಎಂದು ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಶಾಂತಿ-ನೆಮ್ಮದಿ, ಅಸ್ತಿತ್ವ-ಜೀವನದ ಅರ್ಥ, ನೈತಿನ ಮೌಲ್ಯ ಪಡೆಯಲು ಧರ್ಮ ಬೇಕು. ಇದು ಸಂಕಷ್ಟದ ಕಾಲದಲ್ಲಿ ಆತ್ಮಸ್ಥೈರ್ಯ, ಮನಃಶಕ್ತಿ ತುಂಬಿ ಜನರನ್ನು ಕೈಹಿಡಿದು ನಡೆಸುತ್ತದೆ. ಸ್ವಾಮೀಜಿಗಳು, ಮಠಾಧೀಶರು, ಶಿವಶರಣರು ಬೋಧನೆ, ಮಾರ್ಗದರ್ಶನವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ ಎಂದರು.
ಮಠಮಾನ್ಯಗಳು ಆಧ್ಯಾತ್ಮಿಕ, ಧಾರ್ಮಿಕ ಕಾರ್ಯದೊಂದಿಗೆ ಸಮಾಜಮುಖಿ ಕೆಲಸವನ್ನೂ ಮಾಡುತ್ತಿವೆ. ಶಿಕ್ಷಣದೊಂದಿಗೆ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಿ ಗ್ರಾಮಾಂತರ ಪ್ರದೇಶದವರಿಗೆ, ಬಡವರು ಬದುಕು ಕಟ್ಟಿಕೊಳ್ಳಲು ನೆರವಾಗಿವೆ ಎಂದರು.

ಮಠಗಳ ಕುರಿತು ಅನಾದಾರ:


ಮಠ ಕುರಿತು ಸಮಾಜದಲ್ಲಿ ಅನಾದಾರ ಭಾವ ಮೂಡುತ್ತಿದೆ ಎಂದು ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು
ಮಠಗಳು ಸಮಾಜದ ಹತ್ತಿರ ಹೋಗಿ ಅದಕ್ಕೆ ಬೇಕಾದನ್ನೆಲ್ಲ ಕೊಡುತ್ತಿವೆ. ಆದರೆ, ಮಠಗಳ ಕುರಿತು ನಿರ್ಲಕ್ಷೃ ಧೋರಣೆ ವ್ಯಕ್ತವಾಗುತ್ತಿದೆ. ಸಮಾಜ ಸೇವೆ ಈಗ ಕ್ಲಿಷ್ಟಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು. ಶಾಸಕ ಟಿ.ಎಸ್.ಶ್ರೀವತ್ಸ, ವಿದ್ಯಾವಿಕಾಸ ಸಂಸ್ಥೆಯ ಕಾರ್ಯದರ್ಶಿ ವಿ.ಕವೀಶ್‌ಗೌಡ, ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಎಸ್.ಸದಾಶಿವಮೂರ್ತಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net