ಆರ್.ಎಸ್.ಎಸ್. ಬಗ್ಗೆ ಕಾಂಗ್ರೆಸ್ ಗೆ ದ್ವೇಷ- ಸಿ.ಟಿ.ರವಿ ಟೀಕೆ

ct ravi
Published on

ಚಿಕ್ಕಮಗಳೂರು: ಪಿಎಫ್‍ಐ, ಎಸ್‍ಡಿಪಿಐ, ಮುಸ್ಲಿಂ ಲೀಗ್‍ನವರೆಲ್ಲ ಸಾರ್ವಜನಿಕ ಜೀವನದಲ್ಲಿರುವ ಕಾಂಗ್ರೆಸ್ ಮುಖಂಡರಿಗೆ ಜಾತ್ಯತೀತರಾಗಿ ಕಾಣುತ್ತಿದ್ದರೆ, ದೇಶಭಕ್ತ ಸಂಘಟನೆ ಆರ್‍ಎಸ್‍ಎಸ್ ಬಗ್ಗೆ ದ್ವೇಷ ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಮತ್ತಿತರರು ಆರ್‍ಎಸ್‍ಎಸ್ ಬಗ್ಗೆ ಟೀಕಿಸಿರುವುದಕ್ಕೆ ಸುದ್ದಿಗಾರರ ಜತೆ ಪ್ರತಿಕ್ರಿಯಿಸಿದ ಅವರು, ಆರ್‍ಎಸ್‍ಎಸ್ ದೇಶಭಕ್ತ ಸಂಘಟನೆಯಾಗಿದ್ದು, ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆರ್‍ಎಸ್‍ಎಸ್ ಶಾಖೆಗೆ ಬರಬೇಕು ಎಂದರು.

ಎಸ್‍ಡಿಪಿಐ, ಪಿಎಫ್‍ಐನಲ್ಲಿ ತರಬೇತಿ ಪಡೆವರಿಗೆ ಆರ್‍ಎಸ್‍ಎಸ್ ಅರ್ಥವಾಗುವುದಾದರೂ ಹೇಗೆ? ಇವರಿಗೆ ಕನ್ನಡ ವಿರೋಧಿ ಟಿಪ್ಪು ಅಂಥವರು ದೇಶಭಕ್ತರಾಗಿ, ಕನ್ನಡ ಪ್ರೇಮಿಯಾಗಿ ಕಾಣುತ್ತಾರೆ. ಆದರೆ ಕನ್ನಡ ಪ್ರೇಮಿ, ದೇಶಪ್ರೇಮಿ ಸಂಘಟನೆ ಇವರ ಕಣ್ಣಿಗೆ ದ್ವೇಷ ಕಾರುವ ಸಂಘಟನೆಯಾಗಿ ಕಾಣಿಸುತ್ತದೆ ಎಂದರು.

ಆರ್‍ಎಸ್‍ಎಸ್ ವಿರುದ್ಧ ದ್ವೇಷ ಕಾರಿದರೆ ಕಾಂಗ್ರೆಸ್‍ನೊಳಗೆ ಬಡ್ತಿ ಸಿಗುತ್ತದೆ ಎನ್ನುವ ಮನಸ್ಥಿತಿ ಇದೆ. ಸೋನಿಯಾ ಗಾಂಧಿ ನಾಯಕತ್ವ ಕಾಂಗ್ರೆಸ್‍ಗೆ ಬಂದ ಬಳಿಕ ಇದು ಪ್ರಾರಂಭವಾಗಿದೆ. ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಪ್ರಾಮುಖ್ಯತೆ ಪಡೆಯಬೇಕೆಂದು ಆರ್‍ಎಸ್‍ಎಸ್ ಅನ್ನು ದ್ವೇಷಿಸುತ್ತಿದ್ದಾರೆ. ಆದರೆ ಆರ್‍ಎಸ್‍ಎಸ್ ಯಾರನ್ನೂ ದ್ವೇಷಿಸುವುದಿಲ್ಲ. ದೇಶದ ಒಳಗಿರುವ ದೋಷಗಳನ್ನು ದೂರ ಮಾಡುವ ಕೆಲಸ ಮಾಡುತ್ತದೆ. ಅದು ಅವರಿಗೆ ಅರ್ಥವಾಗಿಲ್ಲ ಎಂದರೆ ಅವರು ಸಾರ್ವಜನಿಕ ಜೀವನದಲ್ಲಿರಲು ಅರ್ಹರಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net