

ಮೈಸೂರು: ನಗರ ಪಾಲಿಕೆಯ ಅಧಿಕಾರಾವಧಿ ಮುಕ್ತಾಯದ ಹಂತದಲ್ಲಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ (ಬಿಬಿಎಂಪಿ) ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯನ್ನೂ ಸಹ ನಡೆಸಲು ಸರ್ಕಾರ ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪಾಲಿಕೆ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಿದರು.
ನಗರದಲ್ಲಿರುವ ತಮ್ಮ ನಿವಾಸಕ್ಕೆ ಬುಧವಾರ ಬೆಳಗ್ಗೆ ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರನ್ನು ಆಹ್ವಾನಿಸಿದ ಸಿದ್ದರಾಮಯ್ಯ ಸದಸ್ಯರೊ ಂದಿಗೆ ಉಪಹಾರ ಸೇವಿಸಿ ನಂತರ ಚುನಾವಣೆ ಎದುರಿಸಲು ಕೈಗೊಳ್ಳಬೇಕಾಗಿರುವ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರೊಂದಿಗೆ ನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಭೆ ನಡೆಸಿದ್ದರು. ತವರು ಜಿಲ್ಲೆಯಲ್ಲಿ ನಗರ ಪಾಲಿಕೆ ಆಡಳಿತವನ್ನು ತೆಕ್ಕೆಗೆ ಪಡೆಯುವುದು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಸಜ್ಜುಗೊಳಿಸುತ್ತಿದ್ದಾರೆ.
40 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿ: ನಗರ ಪಾಲಿಕೆಯಲ್ಲಿ ಈ ಬಾರಿ 40 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದ್ದು, ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುವಂತೆ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ. ನಗರ ಪಾಲಿಕೆಯ ಅಧಿಕಾರಾವಧಿ ನ.16ಕ್ಕೆ ಮುಕ್ತಾಯಗೊಳ್ಳಲಿದ್ದು, ಡಿಸೆಂಬರ್ ಅಥವಾ ಜನವರಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಅತಂತ್ರ ಸ್ಥಿತಿಗೆ ಅವಕಾಶ ನೀಡಬೇಡಿ: ನಗರ ಪಾಲಿಕೆಯಲ್ಲಿ ಯಾವುದೇ ಕಾರಣಕ್ಕೂ ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಸರ್ಕಾರ ನೀಡಿರುವ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಕಾಂಗ್ರೆಸ್‌ಗೆ ಕಡೆಗೆ ಸೆಳೆಯಲು ಪ್ರಯತ್ನ ನಡೆಸಬೇಕು. ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದರೆ ನಗರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಲ್ಲ ಕಡೆಗಳಲ್ಲೂ ಕಾಂಗ್ರೆಸ್ ಪರವಾದ ಅಲೆ ಇದ್ದು, ಚುನಾವಣೆ ಎದುರಿಸಲು ಇದು ಸೂಕ್ತವಾದ ಸಮಯವಾಗಿದೆ. ಬಿಬಿಎಂಪಿಯಲ್ಲಿ ಪಕ್ಷ ಗೆಲುವು ಸಾಧಿಸುವುದು ನಿಶ್ಚಿತವಾಗಿದ್ದು, ಮೈಸೂರು ನಗರದಲ್ಲೂ ಗೆಲುವು ಸಾಧಿಸಲು ಎಲ್ಲರು ಶ್ರಮಿಸಬೇಕು. ಈ ಬಾರಿ ಪೂರ್ಣಬಹುಮತ ಪಡೆಯಲು ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಮೇಯರ್ ಚುನಾವಣೆ ಚರ್ಚೆ: ಮೇಯರ್ ಹಾಗೂ ಉಪ ಮೇಯರ್ ಅಧಿಕಾರಾವಧಿ ಸೆ.5ಕ್ಕೆ ಮುಕ್ತಾಯಗೊಳ್ಳಲಿದ್ದು, ಪಾಲಿಕೆಯ ಕೌನ್ಸಿಲ್ ಅವಧಿ ನ.16ಕ್ಕೆ ಮುಕ್ತಾಯಗೊಳ್ಳಲಿದೆ. ಉಳಿದ ಕೇವಲ ಎರಡು ತಿಂಗಳ ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸಬೇಕೇ ಅಥವಾ ಬೇಡವೇ ಎಂಬ ಕುರಿತು ಚರ್ಚೆ ನಡೆಸಿತು. ಈ ಕುರಿತು ಸರ್ಕಾರದ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಪಕ್ಷ ಬದ್ಧ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಸಿದ್ದರಾಮಯ್ಯ ನೀಡಿದರು.
ನಗರ ಪಾಲಿಕೆಗೆ 5 ಸದಸ್ಯರನ್ನು ನಾಮನಿರ್ದೇಶನ ಮಾಡಿರುವುದಕ್ಕೆ ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದ ಅತ್ಯಂತ ಸಣ್ಣ ಸಮುದಾಯಗಳನ್ನು ಗುರುತಿಸಿ ಮುಖ್ಯಮಂತ್ರಿ ಅವರು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವುದು ಶ್ಲಾಘನೀಯ ಎಂದು ಆರ್. ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಮೇಯರ್‌ಗಳಾದ ಆರಿಫ್ ಹುಸೇನ್, ಅಯೂಬ್ ಖಾನ್ ಹಾಗೂ ಇತರರು ಪಾಲ್ಗೊಂಡಿದ್ದರು.
ಪಾಲಿಕೆಯ ರಾಜಕೀಯ ಚಿತ್ರಣ
65 ಸದಸ್ಯ ಬಲದ ಪಾಲಿಕೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರರು ಗೆಲುವು ಸಾಧಿಸಿದ್ದರು. ನಂತರದ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 20ಕ್ಕೆ ಏರಿಕೆಯಾದರೆ ಜೆಡಿಎಸ್ ಸದಸ್ಯರ ಸಂಖ್ಯೆ 17ಕ್ಕೆ ಕುಸಿಯಿತು. ಪ್ರಸ್ತುತ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 20, ಜೆಡಿಎಸ್ 17, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಇದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ನೀಡಿ ವಾರ್ಡ್ ನಂ.18ರಿಂದ (ಯಾದವಗಿರಿ) ಆಯ್ಕೆಗೊಂ ಡಿದ್ದ ಬಿಜೆಪಿಯ ಗುರುವಿನಾಯಕ ಸದಸ್ಯತ್ವ ಕಳೆದುಕೊಂಡ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಬಿ.ವಿ. ರವೀಂದ್ರ ಗೆಲುವು ಸಾಧಿಸಿದರು. ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮರೆಮಾಚಿ 36ನೇ ವಾರ್ಡ್‌ನಿಂದ (ಯರಗನಹಳ್ಳಿ ಅಂಬೇಡ್ಕರ್ ಕಾಲೋನಿ) ಆಯ್ಕೆಗೊಂಡಿದ್ದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಸದಸ್ಯತ್ವ ಕಳೆದುಕೊಂಡರು. ತೆರವುಗೊಂಡ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಜನಿ ಅಣ್ಣಯ್ಯ ಗೆಲುವು ಸಾಧಿಸಿದರು. ಹೀಗಾಗಿ ಕಾಂಗ್ರೆಸ್‌ನ ಸಂಖ್ಯಾಬಲ ನಗರ ಪಾಲಿಕೆಯಲ್ಲಿ 20ಕ್ಕೆ ಏರಿಕೆ ಕಂಡಿತು. ಪ್ರಸ್ತುತ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ.