ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಿಲ್ಲ

IMG-20230328-WA0018-04
Published on

ಚಿತ್ರದುರ್ಗ: ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೇ 2280 ಕೋಟಿ ರೂ.ವೆಚ್ಚದಲ್ಲಿ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ಸೇರಿ ಐದು ತಾಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಕೈಗೆತ್ತಿಕೊಂಡಿರುವುದು ಕಾಂಗ್ರೆಸ್ಸಿನ ಜನಪರ ಕಾಳಜಿಗೆ ನಿದರ್ಶನ ವೆಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ಚಿತ್ರದುರ್ಗ ತಾಲೂಕು ಹುಣಸೇಕಟ್ಟೆಯಲ್ಲಿ ಮಂಗಳವಾರ ತುಂಗಭದ್ರಾ ಹಿನ್ನೀರು ಯೋಜನೆಯಡಿ ಮತ್ತು ಕೇಂದ್ರ ಸರ್ಕಾರದ ಜಲ ಜೀವನ್‌ಮಿಷನ್ ಯೋಜನೆಯಡಿ ಮನೆ, ಮನೆಗೆ ನಲ್ಲಿ ನೀರು ಸಂಪರ್ಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ತುಂಗ-ಭದ್ರಾ ಹಿನ್ನೀರು ಯೋಜನೆಯಡಿ ತುರುವನೂರು ಹೋಬಳಿ ಸೇರಿರಲಿಲ್ಲ. ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವುದರಿಂದ ವಿಶೇಷ ಸಭೆ ಮೂಲಕ ಕಾಂಗ್ರೆಸ್ ಆಡಳಿತಾವಧಿ ಈ ಹೋಬಳಿ ಸೇರಿಸಿದ್ದೇನೆ. ನಾಲ್ಕು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಪ್ರತಿ ಮನೆಗೆ ಶುದ್ಧ ಕುಡಿವ ನೀರು ಪೂರೈಕೆ ಆಗಲಿದೆ ಎಂದರು.

ಜಲಜೀವನ್ ಮಿಷನ್ ಯೋಜನೆಯಡಿ ಹುಣಸೇಕಟ್ಟೆ, ಕೂನಬೇವು, ಕಡಬನಕಟ್ಟೆ ಗ್ರಾಮಗಳಲ್ಲಿ ಆರಂಭವಾಗಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಬಿಜೆಪಿ ಆಡಳಿತದಲ್ಲಿ ಪ್ರತಿಪಕ್ಷಗಳ ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಸ್ತಿತ್ವಕ್ಕೆ ಬರಲಿದೆ ಎಂದರು.

ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ನಿಂಗಮ್ಮ, ಸದಸ್ಯರಾದ ಅರ್ಚನಾ, ಯಶೋಧಮ್ಮ, ಎಸ್. ಪಾಲಯ್ಯ, ಮುಖಂಡರಾದ ಪಿ.ಸಿ. ವೆಂಕಟೇಶ್, ಮೈಲಾರಪ್ಪ, ಮಹಂತೇಶ್, ಕಾಂತರಾಜ್, ಏಕಣ್ಣ, ಕೃಷ್ಣಮೂರ್ತಿ, ಮಾರುತಿ, ಗುರುಮೂರ್ತಿ ಇದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪ. ಪಂಗಡಗಳ ಅಭಿವೃದ್ಧಿ ನಿಗಮದಿಂದ ತುರುವನೂರು ಗ್ರಾಮದಲ್ಲಿ 30 ಫಲಾನುಭವಿಗಳಿಗೆ ಕೃಷಿ ಪಂಪ್‌ಸೆಟ್ ಹಾಗೂ ಮೋಟಾರ್‌ಗಳನ್ನು ಶಾಸಕರು ವಿತರಿಸಿದರು.

ನಿಗಮದ ವ್ಯವಸ್ಥಾಪಕಿ ಮಂಜುಳಾ,ತಾಲೂಕು ಅಭಿವೃದ್ಧಿ ಅಧಿಕಾರಿ ಉಸ್ಮಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net