ಕಾಂಗ್ರೆಸ್​ಗೆ ರಾಷ್ಟ್ರ ಅಭಿವೃದ್ಧಿಯ ದೃಷ್ಟಿಕೋನ ಇಲ್ಲ

joshi farmer
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಾಂಗ್ರೆಸ್​ಗೆ ರಾಷ್ಟದ ಅಭಿವೃದ್ಧಿಯ ದೃಷ್ಟಿಕೋನವಾಗಲಿ, ದೇಶದ ಹಿತ ಕಾಯುವ ಕಾಳಜಿಯಾಗಲಿ ಇಲ್ಲ ಎಂದು ಬಿಜೆಪಿ ಕಿಸಾನ್ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಶಂಭುಕುಮಾರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಧಾರವಾಡ ಗ್ರಾಮೀಣ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ರೈತ ಉತ್ಪಾದಕರ ಸಂಘಗಳ ಪ್ರಮುಖರು ಹಾಗೂ ಪ್ರಗತಿಪರ ರೈತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಯೋಧರು ಹಾಗೂ ರೈತರ ಬಗ್ಗೆ ಯೋಚಿಸುವುದಿಲ್ಲ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕಬ್ಬಿನಿಂದ ಇಥೆನಾಲ್ ತಯಾರಿಕೆಗೆ ಪ್ರೋತ್ಸಾಹ ನೀಡಿರುವ ಪರಿಣಾಮ ರೈತರು 500 ಕೋಟಿ ರೂ. ಆದಾಯ ಗಳಿಸಿದ್ದಾರೆ. ಇದರಿಂದ 70 ಸಾವಿರ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೆರವಾಗಿದ್ದೇವೆ ಎಂದು ಹೇಳುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಗ್ಯಾರಂಟಿಗಿಂತ ದುಪ್ಪಟ್ಟು ಆರ್ಥಿಕ ನೆರವನ್ನು ಬಡವರಿಗೆ ಒದಗಿಸಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗೆ 1.25 ಲಕ್ಷ ಕೋಟಿ ರೂ. ನೆರವು ನೀಡಿದೆ ಎಂದು ಹೇಳಿದರು.

ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಬಿ.ಎಸ್. ನವೀನಕುಮಾರ ಮಾತನಾಡಿ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ಮಾತನಾಡಿದರು. ಶಾಸಕ ಮಹೇಶ ಟೆಂಗಿನಕಾಯಿ, ಬಸವರಾಜ ಕುಂದಗೋಳಮಠ, ಶಶಿಮೌಳಿ ಕುಲಕರ್ಣಿ ಇದ್ದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಆರ್.ಎಸ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರುದ್ರಯ್ಯ ಚಿಕ್ಕಮಠ ಸ್ವಾಗತಿಸಿದರು. ಗುರು ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net