

ಮೂಡಿಗೆರೆ: ಚುನಾವಣಾ ಬಾಂಡ್ ಹೆಸರಿನಲ್ಲಿ ಕಾಂಗ್ರೆಸ್ ಬಿಜೆಪಿ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಘು ಜನ್ನಾಪುರ ತಿಳಿಸಿದ್ದಾರೆ.
ಚುನಾವಣಾ ಬಾಂಡ್ ಎಂಬುದು ಒಂದು ಪಾರದರ್ಶಕ ನೀತಿಯಾಗಿದೆ. ಸಾರ್ವಜನಿಕರು ಇಷ್ಟಪಟ್ಟು ಪಕ್ಷಗಳಿಗೆ ನೀಡುವ ದೇಣಿಗೆಯಾಗಿದೆ. ಅದರಂತೆ ಅನೇಕ ಕಂಪನಿಗಳು, ಸಾರ್ವಜನಿಕರು ದೇಣಿಗೆ ನೀಡಿದ್ದಾರೆ. ಕೇವಲ ಎರಡು ರಾಜ್ಯಗಳಲ್ಲಿ ಆಡಳಿತ ನಡೆಸಲು ಸೀಮಿತವಾಗಿರುವ ಕಾಂಗ್ರೆಸ್‌ಗೆ 1400 ಕೋಟಿ ರೂ. ಚುನಾವಣಾ ಬಾಂಡ್ ಮೂಲಕ ಹಣ ಬಂದಿರುವಾಗ, ದೇಶ ವ್ಯಾಪ್ತಿ ಕೇಂದ್ರ ಮತ್ತು ರಾಜ್ಯಗಳ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಅಧಿಕ ದೇಣಿಗೆ ಬಂದಿರುವುದನ್ನು ಸಹಿಸಿಕೊಳ್ಳದೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆದರಿಸಿ ಬೆದರಿಸಿ ಕಪ್ಪು ಹಣ ಪಡೆದುಕೊಂಡು ಇಡೀ ದೇಶವನ್ನು ಲೂಟಿ ಹೊಡೆದು ಸ್ವಿಸ್ ಬ್ಯಾಂಕ್‌ನಲ್ಲಿ ಇಟ್ಟವರು, 2ಜಿ ಹಗರಣ, ಕಾಮನ್ ವೆಲ್ತ್, ಕಲ್ಲಿದ್ದಲು ಸೇರಿದಂತೆ ಲಕ್ಷಾಂತರ ಕೋಟಿ ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್‌ಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿಳಿಸಿದ್ದಾರೆ. 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಂಪುಟದಲ್ಲಿ ಒಂದು ಕಳಂಕ ಇಲ್ಲದಂತೆ ಕೆಲಸ ಮಾಡಿದ್ದಾರೆ. ದೇಶವನ್ನು ಅರ್ಥಿಕವಾಗಿ ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಅಲ್ಲದೇ ದೇಶದ ಬಲಿಷ್ಟ ಭದ್ರತಾ ನೀತಿ ಸುಧಾರಿಸಿದ್ದಾರೆ. ಕಾಂಗ್ರೆಸ್ ಈಗಾಗಲೇ ಚುನಾವಣಾ ಸೋಲನ್ನು ಒಪ್ಪಿಕೊಳ್ಳುವಂತಾಗಿದೆ. ವಿದ್ಯುತ್, ಭೂ ಕಂದಾಯ, ಸ್ಟ್ಯಾಂಪ್ ಡ್ಯೂಟಿ ಎಲ್ಲವನ್ನು ಹೆಚ್ಚಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತರಿಗೆ ಸಂಬಳ ಹೆಚ್ಚಿಗೆ ಮಾಡಲು ಸಾಧ್ಯವಾಗಿಲ್ಲ. ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅಭಿವೃದ್ಧಿ ಕಾಮಗಾರಿ ಹೆಸರೇ ಇಲ್ಲ. ಬರಗಾಲದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಗ್ಯಾರಂಟಿ ಹೆಸರಲ್ಲಿ ಚುನಾವಣೆ ಗಿಮಿಕ್ ಮಾಡಿ ರಾಜ್ಯ ದಿವಾಳಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.