

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಅಖಂಡತೆ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್‌ನವರ ಹತ್ತಿರ ಯಾವುದೇ ಸರಕು ಇಲ್ಲ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಯಾವುದಕ್ಕೆ ಆದ್ಯತೆ ಕೊಡಬೇಕೆಂಬುದು ಗೊತ್ತಿದೆ. ಕಾಂಗ್ರೆಸ್‌ನವರು ನಾವು ಮಾಡುವ ಕೆಲಸ ಸಹಿಸಿಕೊಳ್ಳುತ್ತಿಲ್ಲ. ಹಾಗಾಗಿಯೇ ಮಧ್ಯಸ್ಥಿಕೆ ವಿಷಯದ ಕುರಿತು ನಕರಾತ್ಮಕವಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು. ಪಾಕಿಸ್ತಾನಕ್ಕೆ ಯಾವ ರೀತಿ ಉತ್ತರ ಕೊಡಬೇಕು ಕೊಡುತ್ತಿದ್ದೇವೆ. ಉಗ್ರವಾದಕ್ಕೆ ನಮ್ಮ ವಿರೋಧ ಇದೆ. ನಾಳೆ ರಾಜ್ಯದಲ್ಲಿ ಬಿಜೆಪಿಯಿಂದ ತಿರಂಗಾ ಯಾತ್ರೆ ನಡೆಯಲಿದೆ. ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.
ಎಚ್.ಡಿ. ದೇವೇಗೌಡರು ಪ್ರಧಾನಿ ಆಗಿದ್ದಾಗ ಪ್ರಸ್ತಾವನೆಯಾಗಿದ್ದ ಹಾಗೂ 2013-13ರಲ್ಲಿ ಮಂಜೂರಾದ ಗದಗ-ವಾಡಿ ಹೊಸ ರೈಲ್ವೆ ಲೈನ್ 55 ಕಿ.ಮೀ. ಪೂರ್ಣ ಆಗಿದೆ. ಇದನ್ನು ನಾಳೆ ಲೋಕಾರ್ಪಣೆ ಮಾಡಲಾಗುವುದು. ಗಿಣಿಗೇರ, ಸಿಂಧನೂರ, ರಾಯಚೂರು ರೈಲ್ವೆ ಕಾಮಗಾರಿ(165 ಕಿ.ಮೀ.) ಪ್ರಾರಂಭಿಸಲಾಗುವುದು. ಕುಷ್ಟಗಿಯಿಂದ ಹುಬ್ಬಳ್ಳಿಗೆ ನಾಳೆ ಹೊಸ ಪ್ಯಾಸೆಂಜರ್ ರೈಲ್ವೆ ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗುವುದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ರಾಮಪ್ಪ ಬಡಿಗೇರ, ಮಹಾನಗರ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಇತರರು ಇದ್ದರು.