

ಬೇಲೂರು : ಕಾಂಗ್ರೆಸ್ ಪಕ್ಷ 60 ವರ್ಷಗಳಿಂದ ದೇಶದ ಜನರಿಗೆ ಹೇಗೆ ಚೊಂಬು ಕೊಟ್ಟಿದೆಯೋ ಹಾಗೇ ರಾಜ್ಯದಲ್ಲಿ 12 ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಸಹ ಜನರಿಗೆ ಚೊಂಬು ಕೊಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಶ್ರೀ ಚನ್ನಕೇಶವಸ್ವಾಮಿ ರಥೋತ್ಸವಕ್ಕೆ ಆಗಮಿಸಿ ದೇವರ ದರ್ಶನ ಪಡೆದ ನಂತರ ಶಾಸಕ ಎಚ್.ಕೆ.ಸುರೇಶ್ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ಜನರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಅಂದರೆ ಅದೇ ಚೊಂಬು. ಮೋದಿಯವರು ಚೊಂಬನ್ನೆಲ್ಲ ತುಂಬಿದರೆ ಕಾಂಗ್ರೆಸ್‌ನವರು ಖಾಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಗೆ ಕಾಂಗ್ರೆಸ್ ಕೊಡುಗೆ ಏನು? ಡಿ.ಕೆ.ಶಿವಕುಮಾರ್ ಇಂಧನ ಮಂತ್ರಿಯಾಗಿ 48 ಸಾವಿರ ಕೋಟಿ ಸಾಲ ಮಾಡಿರುವುದೇ ಕೊಡುಗೆ. ನಾನೂ ಸಹ ಹಿಂದೆ ಇಂಧನ ಮಂತ್ರಿಯಾಗಿದ್ದಾಗ 500 ಕೋಟಿ ಇಟ್ಟಿದ್ದೆ. ನಾನೂ ಒಂದೇ ಒಂದು ರೂ. ವಿದ್ಯುತ್ ಬಿಲ್ ಜಾಸ್ತಿ ಮಾಡ್ಲಿಲ್ಲ. ಒಂದೂ ಮನೆ ಬಿಡದಂಗೆ ಕರೆಂಟ್ ಕೊಟ್ಟಿದ್ದೆ. 15 ಸಾವಿರ ಹುದ್ದೆ ತುಂಬಿದ್ದೆ. ಜತೆಗೆ ದೇವೇಗೌಡರು, ರೇವಣ್ಣ, ಕುಮಾರಣ್ಣರ ಕೊಡುಗೆ ಏನು. ಎಂಬುದನ್ನು ಡಿ.ಕೆ.ಶಿವಕುಮಾರ್ ತೆಗೆದು ನೋಡಲಿ, ಆದರೆ ಕಾಂಗ್ರೆಸ್ ಕೊಡುಗೆ ಅಂದ್ರೆ ರಾಜ್ಯದ 6 ಕೋಟಿ ಜನರಿಗೆ ಖಾಲಿ ಚೊಂಬು ಕೊಟ್ಟಿರೋದೆ ಕೊಡುಗೆ ಎಂದು ಕಿಡಿ ಕಾರಿದರು.
ತೆಂಗು, ಆಲೂಗಡ್ಡೆ ಬೆಳೆಗಾರರಿಗೆ ಸಬ್ಸಿಡಿ ಕೊಟ್ಟಿದ್ದು ಯಾರು. ರೈತರಿಗೆ ಮೋದಿ 6 ಸಾವಿರ ಕೊಡ್ತಿದ್ರು. ಅದನ್ನ ಕಿತ್ತು ಹಾಕಿದವರು ಯಾರು. ಜನರ ತೆರಿಗೆ ಹಣವನ್ನು ಜಾಹೀರಾತಿಗೆ ಕೊಡುತ್ತೀರಿ. ವಿದ್ಯುತ್ ದರ, ಎಣ್ಣೆ ರೇಟ್ ಜಾಸ್ತಿ ಮಾಡಿ ಬಡವರಿಗೊಂದು ಶ್ರೀಮಂತರಿಗೊಂದು ಮಾಡ್ತೀರಿ ಎಂದು ಕಿಡಿ ಕಾರಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಕೆ.ಸುರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ತೋ.ಚ.ಅನಂತ ಸುಬ್ಬರಾಯ, ಮುಖಂಡರಾದ ಎಂ.ಎ.ನಾಗರಾಜ್, ಸಿ.ಎಸ್.ಪ್ರಕಾಶ್, ಶ್ರೀನಿಧಿ, ಲೋಕೇಗೌಡ, ಸಿ.ಎಚ್.ಮಹೇಶ್ ಸೇರಿದಂತೆ ಇತರರಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಲೂರಿಗೆ ಬಂದಿದ್ದರಿಂದ ಅಪವಿತ್ರವಾಗಿತ್ತು. ಆದರೆ ಚನ್ನಕೆಶವಸ್ವಾಮಿ ದೇವರು ನಿನ್ನೆ ಮಳೆ ಬರಿಸಿ ಅದನ್ನೆಲ್ಲ ತೊಳೆದು ಹಾಕುವ ಮೂಲಕ ಹೇಗೆ ಶುದ್ಧಿ ಗೊಳಿಸಿದ್ದಾರೆ. ಅಲ್ಲದೆ ಹಾಸನ, ಕೋಲಾರ, ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಎನ್‌ಡಿಎ ಅಭ್ಯರ್ಥಿ ಸೋಲುತ್ತಾರೆ ಎನ್ನಲು ಡಿ.ಕೆ.ಶಿವಕುಮಾರ್ ಯಾವಾಗ ಶಾಸ್ತ್ರ ಹೇಳೋದು ಕಲಿತ್ರು ಅನ್ನೋದೆ ಗೊತ್ತಿಲ್ಲ. ಮೊದಲು ರಾಹುಲ್ ಗಾಂಧಿನ ಗೆಲ್ಲಿಸಲು ಹೇಳಿ.
ಎಚ್.ಡಿ.ರೇವಣ್ಣ
ಮಾಜಿ ಸಚಿವ