ನುಡಿದಂತೆ ನಡೆದಿದೆ ಕಾಂಗ್ರೆಸ್: ಸಚಿವೆ ಹೆಬ್ಬಾಳ್ಕರ್

Screenshot_2024-04-26-20-50-00-01.jpg
Published on

ಬೆಳಗಾವಿ: ಕಾಂಗ್ರೆಸ್ ಹಿಂದಿನಿಂದಲೂ ಕೊಟ್ಟ ಮಾತು ಉಳಿಸಿಕೊಂಡು ರಾಷ್ಟ್ರ ಮತ್ತು ಜನಸೇವೆ ಮಾಡುತ್ತ ಬಂದಿದೆ. ಹಾಗಾಗಿ ಜನರು ಕಾಂಗ್ರೆಸ್ ಮೇಲೆ ವಿಶ್ವಾಸವಿಟ್ಟಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.
 ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದ ಬನ್ನೂರ ತಾಂಡಾ ಸಮುದಾಯ ಭವನ ಹತ್ತಿರ ಶುಕ್ರವಾರ ನಡೆದ ತಾಲೂಕು ಬಂಜಾರ ಸಮುದಾಯದ (ತಾಂಡಾಗಳ) ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿ ಮೃಣಾಲಗೆ ಮತ ನೀಡಿ ಆಶೀರ್ವದಿಸಬೇಕು ಎಂದರು.
 ರಾಜ್ಯ ಸರ್ಕಾರದಿಂದ ಅನುಷ್ಠಾನಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಬಂಜಾರಾ ಸಮುದಾಯದವರು ಸಂತಸಗೊಂಡಿದ್ದಾರೆ. ಜತೆಗೆ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಕಾಂಗ್ರೆಸ್ ಬಡವರು, ಶ್ರಮಿಕರು, ರೈತರ ಪಕ್ಷವಾಗಿ ಗುರುತಿಸಿಕೊಂಡಿದೆ. ಮಹಿಳೆಯರ ಸ್ವಾವಲಂಬನೆಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಚುನಾವಣೆ ಸಮಯದಲ್ಲಿ ಎಲ್ಲಿಂದಲೋ ಬಂದು ಕರ್ಮಭೂಮಿ ಎನ್ನುವವರನ್ನು ಜನರು ನಂಬಲು ಸಾಧ್ಯವಿಲ್ಲ. ಜನರ ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಹಾಗಾಗಿ ಎಲ್ಲ ವರ್ಗದ ಜನರು, ಮಹಿಳೆಯರು ಕಾಂಗ್ರೆಸ್‌ಗೆ ಮತ ನೀಡಲು ನಿರ್ಧರಿಸಿದ್ದಾರೆ ಎಂದರು.
 ನರೇಗಾ, ಅನ್ನಭಾಗ್ಯ ತಂದಿದ್ದು ಕಾಂಗ್ರೆಸ್. ಬಡವರಿಗಾಗಿ ಎಲ್ಲ ಯೋಜನೆಗಳನ್ನು ರೂಪಿಸಿದ್ದು ಕಾಂಗ್ರೆಸ್. ಕೇವಲ ಯೋಜನೆ ಘೋಷಣೆಯಷ್ಟೇ ಅಲ್ಲ, ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಬದ್ಧತೆಯನ್ನೂ ಕಾಂಗ್ರೆಸ್ ಹೊಂದಿದೆ. ಕೊಟ್ಟ ವಚನದಿಂದ ಎಂದೂ ಹಿಂದೆ ಸರಿಯುವುದಿಲ್ಲ. ಹಾಗಾಗಿ ಪಕ್ಷ-ಜಾತಿ ಭೇದ ಮರೆತು ಎಲ್ಲರೂ ಮೃಣಾಲ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು.
 ಮುಖಂಡರಾದ ಪ್ರದೀಪ ಪಟ್ಟಣ, ಗ್ರಾಪಂ ಅಧ್ಯಕ್ಷೆ ಈರವ್ವ ಲಮಾಣಿ, ಶೇಖರ ಸಿದ್ದಲಿಂಗಪ್ಪನವರ, ಜಿ.ಬಿ.ರಂಗಣ್ಣಗೌಡ, ಜಹುರ್ ಹಾಜಿ, ಪರಶುರಾಮ ಪಮ್ಮಾರ, ತಾರಾಸಿಂಗ್ ರಾಥೋಡ, ಲಕ್ಷ್ಮಣ ರಾಥೋಡ, ಕುಮಾರ ರಾಥೋಡ, ಸೋಮು ಲಮಾಣಿ, ಸುಭಾಷ ಪಮ್ಮಾರ, ಫಕೀರಪ್ಪ ಜಂಗವಾಡ, ಜೀವಲಪ್ಪ ಲಮಾಣಿ, ಶಿವಪ್ಪ ಪೂಜೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net