

ಶಿವಮೊಗ್ಗ: ಅಧಿಕಾರದ ಆಸೆಗಾಗಿ ದೇಶವನ್ನು ಭಾರತ, ಪಾಕಿಸ್ತಾನವೆಂದು ವಿಭಜನೆ ಮಾಡಿದ್ದು ಕಾಂಗ್ರೆಸ್. ಅದನ್ನು ಒಪ್ಪಿಕೊಂಡು ದೇಶದ ಯುವಕರಲ್ಲಿ ಕ್ಷಮೆ ಕೇಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪಆಗ್ರಹಿಸಿದರು.
ನಗರ ಬಿಜೆಪಿ ಘಟಕದಿಂದ ಸೋಮವಾರ ಸಂಜೆ ಖಾಸಗಿ ಬಸ್ ನಿಲ್ದಾಣದಿಂದ ಬಿ.ಎಚ್.ರಸ್ತೆ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ ವಿಭಜನ ವಿಭೀಷಿಕ್ ಸ್ಮತಿ ದಿವಸ್ ನಿಮಿತ್ತ ಪಂಜಿನ ಮೆರವಣಿಗೆ ನಡೆಸಿದ ಬಳಿಕ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕಾಂಗ್ರೆಸ್‌ನವರೇ ರೂವಾರಿಗಳು ಎಂದು ದೂರಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರೇ ಈ ದೇಶವನ್ನು ತುಂಡು ಮಾಡಿದವರು ನೀವೇ(ಕಾಂಗ್ರೆಸ್ಸಿಗರು). ಅವತ್ತು ನೀವು ವಿಭಜನೆ ಮಾಡಿದ ಕಾರಣ ಭಾರತದ ಮೂಲೆ ಮೂಲೆಗಳಲ್ಲಿ ದೇಶ ವಿರೋಧಿಗಳ ಹುಟ್ಟುಕೊಳ್ಳುತ್ತಿದ್ದಾರೆ ಎಂದರು.
ಕಾಶ್ಮೀರದ ರಾಜ್ಯದ ಭಾಗ ಈಗ ಭಾರತಕ್ಕೆ ಬಂದಿದೆ. ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಧಾನಿ ಆಗಲೆಂದು ಪಾಕಿಸ್ತಾನ ಜನ ಈಗ ಬಯಸುತ್ತಿದ್ದಾರೆ. ಪಾಕಿಸ್ತಾನ ಭಾರತಕ್ಕೆ ಸೇರುತ್ತದೆ. ಅಖಂಡ ಭಾರತದ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕಾಶಿಯಲ್ಲಿ ವಿಶ್ವನಾಥ ದೇವಾಲಯ ಮತ್ತೆ ನಿರ್ಮಾಣಗೊಳ್ಳುತ್ತದೆ. ಅದೇ ರೀತಿ ಮಥುರದಲ್ಲೂ ಶ್ರೀ ಕೃಷ್ಣನ ದೇವಸ್ಥಾನ ಮತ್ತೆ ಬರುತ್ತದೆ ಎಂದು ಹೇಳಿದರು.
ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಂ.ಬಿ.ಭಾನುಪ್ರಕಾಶ್ ಮಾತನಾಡಿ, ದೇಶದಲ್ಲಿ ಯಾವುದೇ ಜಾತಿಯ ಸೋಂಕು ಇಲ್ಲದೇಹಿಂದು, ಮುಸ್ಲಿಂ ಸೇರಿ ಎಲ್ಲರೂ ಒಟ್ಟುಗೂಡಿ ಹೋರಾಟ ಮಾಡಲಾಗಿದೆ. ಇದು ಹಿಂದು ಮುಸ್ಲಿಮರ ನಡುವಿನ ಯುದ್ಧವಲ್ಲ. ಸಾತ್ವಿಕವಾಗಿ ಬದುಕಲು ಅವಕಾಶ ಕೊಟ್ಟ ದೇಶ ನಮ್ಮದು. ಆದರೆ ನಮ್ಮ ಸಾತ್ವಿಕತೆಯನ್ನು ದುರುಪಯೋಗ ಮಾಡಿಕೊಂಡವರ ವಿರುದ್ಧ ಹೋರಾಟ ಮಾಡಲಾಗಿದೆ ಎಂದರು.
ಮಹಮದ್ ಆಲಿ ಜಿನ್ನಾ, ಕಾಂಗ್ರೆಸ್ ಮತ್ತು ಬ್ರಿಟೀಷರು ಭಾರತವನ್ನು ಇಬ್ಭಾಗ ಮಾಡಿದರು. ದೇಶ ವಿಭಜನೆ ಆಗಲು ಜಿನ್ನಾ ಎಷ್ಟು ಕಾರಣವೋ ಕಾಂಗ್ರೆಸ್ ಕೂಡ ಅಷ್ಟೇ ಕಾರಣ. ನಮಗೆ ಪಾಕಿಸ್ತಾನದ ಮೇಲೆ ಸೈನಿಕ ಕಾರ್ಯಾಚರಣೆ ಮಾಡುವ ಉದ್ದೇಶವಿಲ್ಲ. ಯಾವ ಮಾನಸೀಕತೆ ಕಾರಣಕ್ಕೆ ದೇಶ ವಿಭಜನೆ ಆಯಿತೋ ಅದನ್ನು ತೆಗೆಸಲು ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಎ.ಎನ್.ನಟರಾಜ್, ನಗರ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಜ್ಞಾನೇಶ್ವರ್, ಜಿಪಂ ಮಾಜಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಮುಖಂಡರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಹೃಷಿಕೇಶ್ ಪೈ, ರಮೇಶ್, ಸಿ.ಎಚ್.ಮಾಲತೇಶ್, ವಿಶ್ವನಾಥ, ಅನಿತಾ ರವಿಶಂಕರ್, ಸೀತಾಲಕ್ಷ್ಮೀ, ಸುರೇಖಾ ಮುರುಳೀಧರ್, ಲಕ್ಷ್ಮೀ, ಯಶೋಧಮ್ಮ ಮತ್ತಿತರರು ಉಪಸ್ಥಿತರಿದ್ದರು.
ಹಿಂದು ಜಾಗರಣ ವೇದಿಕೆಯಿಂದ ಮೆರವಣಿಗೆ
ಅಖಂಡ ಭಾರತ ಸಂಕಲ್ಪ ದಿನದ ನಿಮಿತ್ತ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಟಿ.ಸೀನಪ್ಪ ಶೆಟ್ಟಿ ವೃತ್ತದವರೆಗೆ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು. ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಭಾರತಾಂಬೆ ಭಾವಚಿತ್ರದೊಂದಿಗೆ ಹೊರಟ ಮೆರವಣಿಗೆಯು ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ನೆಹರು ರಸ್ತೆ ಮಾರ್ಗವಾಗಿ ಸೀನಪ್ಪ ವೃತ್ತ ತಲುಪಿತು. ಪಂಜಿನ ಮೆರವಣಿಗೆ ಹಿನ್ನೆಲೆಯಲ್ಲಿ ಗಾಂಧಿಬಜಾರ್, ಅಮೀರ್ ಅಹಮ್ಮದ್ ವೃತ್ತ, ಸೀನಪ್ಪ ವೃತ್ತದಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಯಿತು. ಬಿಜೆಪಿ ಹಾಗೂ ಹಿಂದು ಜಾಗರಣ ವೇದಿಕೆಯಿಂದ ಪ್ರತ್ಯೇಕವಾಗಿ ಪಂಜಿನ ಮೆರವಣಿಗೆ ಕಾರಣದಿಂದ ಸಂಜೆ ಒಂದು ಗಂಟೆ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.