ಕಾಂಗ್ರೆಸ್‌ನವರದು ಪಾಕಿಸ್ತಾನ ಮನಸ್ಥಿತಿ

20ckm6- c.t.ravi
ಮಾಜಿ ಸಚಿವ ಸಿ.ಟಿ.ರವಿ
Published on

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರವು ಮೂವತ್ತು ವರ್ಷಗಳ ಹಿಂದೆ ಹುಬ್ಬಳ್ಳಿಯನ್ನು ಪಾಕಿಸ್ತಾನ ಮಾಡಿತ್ತು. ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಡದಂಥ ಪಾಕಿಸ್ತಾನದ ಮನಸ್ಥಿತಿ ಇತ್ತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕಿಡಿಕಾರಿದರು.
ಇಲ್ಲಿಯ ಚನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.
ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ ಅಂದು ಬಲಿದಾನ ಆದವರೂ ಇದ್ದಾರೆ. ಪಾಕಿಸ್ತಾನದ ಮನಸ್ಥಿತಿ ಹೊಂದಿದ್ದ ಕಾಂಗ್ರೆಸ್ ಸರ್ಕಾರ, ಹುಬ್ಬಳ್ಳಿಯನ್ನೂ ಅದೇ ರೀತಿಯಲ್ಲಿ ನೋಡಿತ್ತು. ಈಗ ಇದೇ ಮೈದಾನದಲ್ಲಿ ನಾವು ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದೇವೆ ಎಂದರು.
ನಾವು ಯಾವಾಗ ಸಂಘಟಿತರಾಗುತ್ತೇವೆಯೋ, ಆವಾಗ ದೇಶದ್ರೋಹಿಗಳ ಸದ್ದು ಅಡಗುತ್ತದೆ. ಅದಕ್ಕಾಗಿಯೇ ಬಾಲಗಂಗಾಧರ ತಿಲಕರು ಗಣೇಶೋತ್ಸವ ಆಚರಣೆ ಜಾರಿಗೆ ತಂದರು. ನಾವೆಲ್ಲ ಒಗ್ಗಟ್ಟಾಗಿ, ದೇಶಪ್ರೇಮ ಮೆರೆಯಬೇಕು ಎಂದರು.
ಪ್ರತಿ ದೇಶಕ್ಕೂ ಒಂದು ಆತ್ಮವಿದೆ. ನಮ್ಮ ದೇಶದ ಆತ್ಮ ಹಿಂದುತ್ವ. ಅದನ್ನೇ ದುರ್ಬಲಗೊಳಿಸುವ ಸಂಚು ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ದೇಶಕ್ಕೆ ಉಳಿಗಾಲವಿಲ್ಲ. ಜೈ ಭೀಮ್ ಎನ್ನುವವರು, ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಜೈ ಭೀಮ್ ಜೈ ಭಾರತ್ ಎನ್ನುತ್ತಿದ್ದರು. ಆ ಭೀಮನ ಶಕ್ತಿ ಭಾರತ ಮೇಲೆತ್ತಲು ಬಳಕೆಯಾಗಬೇಕು ಎಂದರು.
ಹಿಂದು ವಿರೋಧಿಗಳು, ನಮನ್ನು ನೀವ್ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ನಾವು ರಾಮನ ಅನುಯಾಯಿಗಳು, ಹನುಮನ ಭಕ್ತರು ಎಂದು ಎದೆತಟ್ಟಿ ಹೇಳಬೇಕು. ಅವರಿಗೆ ಇಲ್ಲಿರಲು ಆಶ್ರಯ ನೀಡಿದವರು ಯಾರು? ಎನ್ನುವುದನ್ನು ಮೊದಲು ತಿಳಿಯಲಿ. ಅಸಂಬದ್ಧ ಮಾತುಗಳನ್ನಾಡಿದರೆ ಬಾಲ ಹೇಗೆ ಕತ್ತರಿಸಬೇಕೆನ್ನುವುದೂ ನಮಗೆ ಗೊತ್ತಿದೆ ಎಂದು ತಿವಿದರು.
ಡಿಜೆ ಹಚ್ಚಬಾರದಂತೆ, ಪ್ರಸಾದ ಪರೀಕ್ಷಿಸಬೇಕಂತೆ ಹೀಗೆ ಏನೇನೋ ನಿಯಮಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಓಲೈಕೆ ರಾಜಕಾರಣವೇ ಅದಕ್ಕೆ ಮುಖ್ಯ ಕಾರಣ. ನಾವು ಸಹ ಕೋಮುವಾದಿಗಳಾಗಿದ್ದರೆ, ನಮ್ಮನ್ನು ಪ್ರಶ್ನೆ ಮಾಡುವವರೇ ಇರುತ್ತಿರಲಿಲ್ಲ. ನಾವಿಬ್ಬರು ನಮಗಿಬ್ಬರು ಎನ್ನುವ ಕೌಟುಂಬಿಕ ತತ್ವಸಿದ್ಧಾಂತ ಬಿಟ್ಟು, ನಮ್ಮ ಹಿರಿಯರಂತೆ ನಾವು ತಾಕತ್ತು ತೋರಿಸಬೇಕಿದೆ ಎಂದು ಸಿ.ಟಿ. ರವಿ ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹಿಂದೆ ಇದೇ ಮೈದಾನದಲ್ಲಿ ಘರ್ಷಣೆಯಾಗಿತ್ತು. ಈಗ ಇದೇ ಮೈದಾನದಲ್ಲಿ ಕೋಮು ಸೌಹಾರ್ದತೆಯಲ್ಲಿ ಗಣೇಶೋತ್ಸವ ಆಚರಿಸುತ್ತಿದ್ದೇವೆ. ಅನೇಕರು ವಿರೋಧಿಸಿದ್ದರೂ ಲೆಕ್ಕಿಸದೆ ಶಾಂತಿಯಿಂದ ಹಬ್ಬ ಮಾಡಿದ್ದೇವೆ ಎಂದರು.
ರಾಣಿ ಚನ್ನಮ್ಮ ಶ್ರೀ ಗಜಾನನ ಉತ್ಸವ ಮಹಾಮಂಡಳದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ವಿ.ಎಸ್.ವಿ. ಪ್ರಸಾದ, ಮಹಾಮಂಡಳ ಅಧ್ಯಕ್ಷ ಸಂಜೀವ ಬಡಸ್ಕರ್, ಎಂಎಲ್‌ಸಿ ಪ್ರದೀಪ ಶೆಟ್ಟರ್, ಮೇಯರ್ ರಾಮಣ್ಣ ಬಡಿಗೇರ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಇತರರು ಇದ್ದರು.
ಕಾಲಧರ್ಮ ಪಾಠ ಹೇಳಿದ ಸಿಟಿಆರ್: ಎಂಎಲ್‌ಸಿ ಸಿ.ಟಿ. ರವಿ ಅವರು ಕಾಲಧರ್ಮದ ಪಾಠ ಮಾಡಿದರು. ಕಾಲ ಧರ್ಮವು ನಮಗೆಲ್ಲವನ್ನೂ ತಿಳಿಸಿಕೊಟ್ಟಿದೆ. ನಾವು ತಿಳಿಸಿಕೊಡಲೂ ಬದ್ಧರಾಗಿದ್ದೇವೆ. ಶಾಂತಿ ಮತ್ತು ಪ್ರೀತಿಯಿಂದ ಇರುವವರಿಗೆ ಅದನ್ನೇ ಕೊಡುತ್ತೇವೆ. ತಿರುಗಿಬಿದ್ದರೆ ಎದಿರೇಟು ನೀಡಲು ನಾವು ಸನ್ನದ್ಧರಾಗಿದ್ದೇವೆ. ಅಫ್ಜಲ್‌ನಂಥವರು ಬಂದರೆ ಶಿವಾಜಿ ಮಹಾರಾಜ ರೂಪದಲ್ಲಿ ಏಟು ಕೊಡುವುದೂ ಗೊತ್ತಿದೆ ಎಂದು ಕಿಡಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net