

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮಹಿಳಾ ಮೀಸಲು ಪ್ರಮಾಣವನ್ನು ಶೇ.33ಕ್ಕೆ ಹೆಚ್ಚಿಸುವ ಪ್ರಸ್ತಾಪದ ಹಿಂದೆ ಮಹಿಳಾ ಮತದಾರರನ್ನು ಸೆಳೆಯುತ್ತಿರುವ ಕಾಂಗ್ರೆಸ್‌ನಡೆಯನ್ನು ಅವಲಂಬಿಸಿದೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿದೆ.
ಸೆಪ್ಟೆಂಬರ್ 18ರಿಂದ 22ರವರೆಗೆ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಇದರಲ್ಲಿ ಮಹಿಳಾ ಮೀಸಲು ಸಂಬಂಧ ವಿಧೇಯಕ ಮಂಡನೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲು ನೀಡಲು ಅವಕಾಶ ಮಾಡಿಕೊಡುವ ಮಸೂದೆ ತರುವ ಉದ್ದೇಶವಿದೆ.
ಈ ತೀರ್ಮಾನದ ಹಿಂದೆ ಕಾಂಗ್ರೆಸ್‌ನ ಇತ್ತೀಚಿನ ತೀರ್ಮಾನಗಳು ಕಾರಣ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆ ಹಾಗೂ ಅದರ ಅನುಷ್ಠಾನ ಕೂಡ ಕಾರಣ ಎಂಬ ಅಭಿಪ್ರಾಯ ಕಾಂಗ್ರೆಸ್ ಚಿಂತಕರ ಚಾವಡಿಯಲ್ಲಿದೆ.
ಸಿಎಸ್‌ಡಿಎಸ್ ಸಂಸ್ಥೆ ಲೋಕಸಭೆ ಚುನಾವಣೆಯ ವೇಳೆ ನಡೆಸಿದ ಅಧ್ಯಯನಗಳ ಪ್ರಕಾರ
2014ರ ಚುನಾವಣೋತ್ತ ಸಮೀಕ್ಷೆಯಲ್ಲಿ ಶೇ.29ರಷ್ಟು ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದರು. 2019ರ ವೇಳೆಗೆ ಇದು ಶೇ.36ವರೆಗೆ ವೃದ್ಧಿಯಾಗಿತ್ತು. ಆದರೆ, 2019ರ ಬಳಿಕ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸೋತ ರಾಜ್ಯಗಳಲ್ಲಿ ಮಹಿಳೆಯರು ಬಿಜೆಪಿಯಿಂದ ದೂರ ಸರಿದಿರುವುದು ಕಂಡುಬಂದಿದೆ. ಬಂಗಾಳ, ಕರ್ನಾಟಕ, ಹರಿಯಾಣದಲ್ಲಿ ಕೂಡ ಈ ಬೆಳವಣಿಗೆ ಕಾಣಿಸಿದೆ.
ಕರ್ನಾಟಕದ ವಿಚಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ ನೇರವಾಗಿ ಮಹಿಳೆಯರನ್ನು ಗುರಿಯಾಗಿಸಿ ನೇರ ಲಾಭ ಕೊಡುತ್ತಿದೆ. ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಕೂಡ ಮಹಿಳೆಯರನ್ನು ತಲುಪುತ್ತಿದೆ. ಇದು ಸಹಜವಾಗಿ ಲೋಕಸಭೆ ಚುನಾವಣೆಯಲ್ಲಿ ಒಂದಷ್ಟು ಪರಿಣಾಮ ಬೀರಬಹುದೆಂದು ಊಹಿಸಲಾಗಿದೆ.
ಕರ್ನಾಟಕ ಹೊರತಾಗಿ ಚುನಾವಣೆ ನಡೆಯುವ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ವಿವಿಧ ಗ್ಯಾರಂಟಿ ಭರವಸೆ ಪ್ರಕಟಿಸುತ್ತಿದೆ. ಮಹಿಳೆಯರಿಗೆ ಮೊಬೈಲ್ ನೀಡುವುದಾಗಿಯೂ ವಾಗ್ದಾನ ನೀಡಿದೆ. ಇಂತಹ ಬೆಳವಣಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೆಟ್ಟುಕೊಡಬಹುದು ಎಂಬ ಅಂದಾಜಿನಲ್ಲಿ ಮಹಿಳಾ ಮೀಸಲು ಮಸೂದೆ ತರಲು ಬಿಜೆಪಿ ಹೊರಟಿದೆ ಎಂಬುದು ಕಾಂಗ್ರೆಸ್ ವಲಯದ ಚಿಂತಕರ ಅಭಿಪ್ರಾಯವಾಗಿದೆ.
ಈ ಮಧ್ಯೆ ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದಂತೆ ಈಗ ಮೀಸಲು ನೀಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಬಿಜೆಪಿ ವಾದವಾಗಿದೆ.