

ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಭ್ರಷ್ಟಾಚಾರದ ಹಲವು ಮುಖಗಳನ್ನು ಹೊಂದಿದೆ. ಇದರಿಂದಾಗಿ ರಾಜ್ಯಕ್ಕೆ ಅಪಖ್ಯಾತಿ ಬಂದೊದಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಟೀಕಿಸಿದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಪಿಎಸ್‌ಐ, ಸಹಾಯಕ ಉಪನ್ಯಾಸಕ, ಜೆಇ, ಎಇ ಹಾಗೂ ಡಿಸಿಸಿ ಬ್ಯಾಂಕ್ ಹುದ್ದೆಗಳು ಮಾರಾಟದಲ್ಲಿದ್ದು, 40 ಪರ್ಸೆಂಟ್ ಕಮೀಷನ್ ಸರ್ಕಾರವೆಂದು ಪ್ರಧಾನಮಂತ್ರಿಗೆ ಗುತ್ತಿಗೆದಾರರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪತ್ರ ಬರೆದಿದೆ. ಈ ನಡುವೆ ರಾಜ್ಯಕ್ಕೆ ಎಂಟು ಬಾರಿ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮೌನಕ್ಕೆ ಶರಣಾಗಿರುವುದು ದುರದೃಷ್ಠಕರ ಎಂದು ಟೀಕಿಸಿದರು.
ಪೇ-ಸಿಎಂ ಎಂದು ಖ್ಯಾತರಾಗಿರುವ ಬೊಮ್ಮಾಯಿ ಅವರು ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಆಕ್ಷೇಪಕ್ಕೆ ಕೋಪಗೊಳ್ಳುತ್ತಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಗದುಗಿನ ದಿಂಗಾಲೇಶ್ವರ ಶ್ರೀಗಳು ಬಹಿರಂಗ ಹೇಳಿಕೆ ನೀಡಿದ್ದರು. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಪಾಲಕರು ಶ್ರಮವಹಿಸುತ್ತಿದ್ದಾರೆ. ಆದರೆ, ಪಿಎಸ್‌ಐ, ಉಪನ್ಯಾಸಕ ಹಾಗೂ ಇಂಜಿನಿಯರಿಂಗ್ ಹುದ್ದೆಗಳು ತಲಾ 50 ರಿಂದ 80 ಲಕ್ಷ ರೂ ಮಾರಾಟವಾದರೆ ಯುವಕರ ಉದ್ಯೋಗದ ಪಾಡೇನು ಎಂದು ಪ್ರಶ್ನಿಸಿದರು.
ಬಿಜೆಪಿಯ ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದಲ್ಲಿ ಎರಡು ಸಾವಿರ ಕೋಟಿ ರೂಗೆ ಮುಖ್ಯಮಂತ್ರಿ ಹುದ್ದೆ ಮಾರಾಟಕ್ಕಿದೆ ಹಾಗೂ ಕೈಗಾರಿಕಾ ಮಂತ್ರಿ ತಲೆ ಹಿಡುಕ ಎಂದು ಸಂಬೋಧಿಸುತ್ತಾರೆ. ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಎಂದು ರೌಡಿ ಎಂದು ಕರೆಯುತ್ತಾರೆ. ಶಿಸ್ತಿನ ಪಕ್ಷವಾಗಿರುವ ಬಿಜೆಪಿ ಅವರ ನಾಯಕರ ಮೇಲೆ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ ಆರೋಪಿಗಳು ಸತ್ಯವೆಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ ಅವರು, ಬಿಜೆಪಿ ಸರ್ಕಾರ ಜನವಿರೋಧಿಯಾಗಿದೆ. ಆದ್ದರಿಂದ ಪಕ್ಷದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಕಾಂಗ್ರೆಸ್ ಜನಪರವಾದ ಗ್ಯಾರಂಟಿ ಕಾರ್ಡ್ ವಿತರಿಸುತ್ತಿದೆ. 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಗೃಹಿಣಿಗೆ ಮಾಸಿಕ 2 ಸಾವಿರ ರೂ ಹಾಗೂ ತಲಾ 10 ಕೆ.ಜಿ ಅಕ್ಕಿ ವಿತರಿಸುವ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್‌ಗಳನ್ನು ಪ್ರತೀ ಮನೆ ಮನೆಗೆ ವಿತರಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇನ್ನು ಜೆಡಿಎಸ್ ಪಕ್ಷ ಬಿಜೆಪಿಯ ‘ಬಿ’ ಟೀಮ್ ಆಗಿದೆ. ಜಿಲ್ಲೆಯ ರೈತರ ಬವಣೆ ಹೆಚ್ಚಳವಾಗಿದೆ. ಶ್ರಮಜೀವಿಗಳ ದುಡಿಮೆಗೆ ಪ್ರತಿಫಲವಿಲ್ಲವಾಗಿದೆ. ನಿರ್ಗತಿಕ ರೈತರಿಗೆ ಭೂಮಿ ನೀಡಲು ಉಳುವವನೇ ಭೂ ಒಡೆಯ ಹಾಗೂ ಭೂ ಮಿತಿ ಕಾಯ್ದೆಯನ್ನು ಕಾಂಗ್ರೆಸ್ ಜಾರಿಗೊಳಿಸಿತ್ತು. ಬಿಜೆಪಿ ಆ ಕಾಯ್ದೆಯನ್ನು ರದ್ದುಗೊಳಿಸಿ ಉಳ್ಳವರು ಭೂ ಖರೀದಿಗೆ ಹಸಿರು ನಿಶಾನೆ ತೋರಿ ನಿರ್ಗತಿಕರನ್ನು ವಂಚಿಸಿದೆ. ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾದಾಗ ಕಾಂಗ್ರೆಸ್ ಅದನ್ನು ವಿರೋಧಿಸಿದರೆ, ಜೆಡಿಎಸ್ ಸದನತ್ಯಾಗ ಮಾಡಿ ಪರೋಕ್ಷವಾಗಿ ರೈತ ವಿರೋಧಿ ಕಾಯ್ದೆಗಳ ಜಾರಿಗೆ ಸಮ್ಮತಿ ಸೂಚಿಸಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಬೆಂಬಲ ಪಡೆದು ಬಿಜೆಪಿ ಮೇಯರ್ ಹಾಗೂ ಉಪ ಮೇಯರ್ ಹುದ್ದೆಯನ್ನು ಅನುಭವಿಸುತ್ತಿದೆ. ರಾಜ್ಯ ಸರ್ಕಾರ ಅಲ್ಪಸಂಖ್ಯಾತ ವಿರೋಧಿ ಕಾನೂನು ಜಾರಿಗೊಳಿಸಿದರೆ, ಜೆಡಿಎಸ್ ಪರೋಕ್ಷವಾಗಿ ಬೆಂಬಲಿಸುತ್ತದೆ. ಇದನ್ನು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅಲ್ಲಗೆಳೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಎಐಸಿಸಿ ವೀಕ್ಷಕ ರೋಜಿ ಜಾನ್, ಕೆಪಿಸಿಸಿ ಉಪಾಧ್ಯಕ್ಷರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮುಖಂಡರಾದ ದಡದಪುರ ಶಿವಣ್ಣ, ಕೆ.ಬಿ.ಚಂದ್ರಶೇಖರ್, ರಮೇಶ ಬಂಡಿಸಿದ್ದೇಗೌಡ, ಸಚ್ಚಿನ್‌ಮಿಗಾ, ಗುರುಚರಣ್, ರವಿ ಗಣಿಗ, ಡಾ.ಕೃಷ್ಣ ಇತರರಿದ್ದರು.