ಹಿಂದು ಕಾರ್ಯಕರ್ತರ ದಮನಕ್ಕೆ ಕಾಂಗ್ರೆಸ್​ ಸರ್ಕಾರ ಯತ್ನ...

Yashpal
Published on

ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ

ಗೃಹ ಇಲಾಖೆ ವೈಫಲ್ಯ ಮರೆಮಾಚಲು ಪ್ರಯತ್ನ

ವಿಜಯವಾಣಿ ಸುದ್ದಿಜಾಲ ಉಡುಪಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಇಲಾಖೆಯ ಸಂಪೂರ್ಣ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದೆ ಹತಾಶಗೊಂಡಿರುವ ರಾಜ್ಯ ಕಾಂಗ್ರೆಸ್​ ಸರ್ಕಾರ, ಕರಾವಳಿ ಭಾಗದ ಹಿಂದು ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ದಮನಿಸಲು ಯತ್ನಿಸುತ್ತಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೌಡಿಗಳಂತೆ ಬಿಂಬಿಸಲು ಹುನ್ನಾರ

ಹಿಂದು ಮುಖಂಡ ಡಾ. ಪ್ರಭಾಕರ ಭಟ್​ ಕಲ್ಲಡ್ಕ ಅವರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ಅರುಣ ಪುತ್ತಿಲ ಅವರನ್ನು ಗಡಿಪಾರು ಮಾಡಲು ನೋಟಿಸ್​ ಜಾರಿ ಮಾಡಿದ್ದಾರೆ. ಹಿಂದು ಕಾರ್ಯಕರ್ತರ ಮನೆಗೆ ರಾತೋರಾತ್ರಿ ಪೊಲೀಸರು ತೆರಳಿ, ಜಿಪಿಎಸ್​ ಫೋಟೋ ತೆಗೆದು, ಅವರನ್ನು ರೌಡಿಗಳಂತೆ ಬಿಂಬಿಸಿ ಮಾನಸಿಕ ಸ್ಥೈರ್ಯ ಕುಗ್ಗಿಸಲು ಪೊಲೀಸ್​ ಇಲಾಖೆ ಮುಂದಾಗಿದೆ. ಇದು ಖಂಡನೀಯ.

ಸುಳ್ಳು ಪ್ರಕರಣ ದಾಖಲು

ಮತಾಂಧ ಶಕ್ತಿಗಳ ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್​ ಸರ್ಕಾರ, ಜಿಲ್ಲೆಯ ಪೊಲೀಸ್​ ವ್ಯವಸ್ಥೆಯನ್ನೂ ತನ್ನ ಕೈಗೊಂಬೆಯನ್ನಾಗಿಸಿಕೊಂಡಿದೆ. ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ಡ್ರಗ್ಸ್​ ದಂಧೆ, ಲವ್​ ಜಿಹಾದ್​, ಅಕ್ರಮವಾಗಿ ಗೋ ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್​ ಇಲಾಖೆ ವಿಫಲವಾಗಿದೆ. ಕಾಂಗ್ರೆಸ್​ ಹಾಗೂ ಎಸ್​ಡಿಪಿಐ ಮುಖಂಡರ ಅಣತಿಯಂತೆ ಸುಳ್ಳು ಕೇಸ್​ ದಾಖಲಿಸಿ ಹಿಂದು ಕಾರ್ಯಕರ್ತರನ್ನು ಜೈಲುಪಾಲು ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟ ಸನ್ನಿವೇಶ ನಿರ್ಮಾಣ

ಕಾಂಗ್ರೆಸ್​ ಸರ್ಕಾರ ಕರಾವಳಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು. ಅದನ್ನು ಬಿಟ್ಟು ಹಿಂದು ವಿರೋಧಿ ನಿಲುವು ಹಾಗೂ ಹಿಂದು ಕಾರ್ಯಕರ್ತರನ್ನು ದಮನಿಸುವ ಪ್ರಯತ್ನ ಮುಂದುವರಿಸಿದರೆ ಬೀದಿಗಿಳಿದು ಹೋರಾಟ ಮಾಡುವ ಸನ್ನಿವೇಶ ನಿಮಾರ್ಣವಾಗಲಿದೆ ಎಂದು ಜೂನ್​ 2ರಂದು ಪ್ರಕಟಣೆಯಲ್ಲಿ ಯಶ್​ಪಾಲ್​ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net