

ಶಿರಸಿ: ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾಗಿದ್ದಾಗ ಅಭಿವೃದ್ಧಿಪಡಿಸಿದ ರಸ್ತೆಗಳನ್ನು ಕಂಡು ಶಾಸಕ ಭೀಮಣ್ಣ ನಾಯ್ಕ ಲೇವಡಿ ಮಾಡಿದ್ದರು. ಮಿಣಿಮಿಣಿ ದೀಪ ಹಾಕಿಸಿದರೆ ಅದು ಅಭಿವೃದ್ಧಿಯಲ್ಲ ಎಂದಿದ್ದರು. ಈಗ ಅವರೇ ಶಾಸಕರಾಗಿದ್ದು, ಯಲ್ಲಾಪುರ ರಸ್ತೆಯಲ್ಲಿ ಅವರದೇ ಸುಪ್ರಿಯಾ ಹೋಟೆಲ್ ಎದುರಿನಿಂದ ರಾಘವೇಂದ್ರಮಠ ವೃತ್ತದವರೆಗೆ ರಸ್ತೆ ಮಾಡಿಸಿ ದಾರಿ ದೀಪ ಅಳವಡಿಸಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯದಲ್ಲಿ ಸಂಪೂರ್ಣ ವಿಫಲವಾಗಿದ್ದರೂ ಅವರ ವಕ್ತಾರರು ಬಿಜೆಪಿಯನ್ನು ಟೀಕಿಸುವುದನ್ನು ನಿಲ್ಲಿಸಿಲ್ಲ. ಪ್ರಚಾರ ಪಡೆಯುವ ಗೀಳು ಕಾಂಗ್ರೆಸ್‌ನವರಿಗೆ ಹಿಂದಿನಿಂದಲೂ ಇದೆ. ಕಾಗೇರಿ ಅವರ ಅಭಿವೃದ್ಧಿ ಕಾರ್ಯ ಅರಗಿಸಿಕೊಳ್ಳಲಾಗದೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯವಾಗಿ ಬೆಳೆ ವಿಮೆ ಪರಿಹಾರ ಮಂಜೂರಿಗೆ ಕಾಳಜಿ ವಹಿಸಿ ಕೇಂದ್ರ ಕೃಷಿ ಸಚಿವರನ್ನು ಮೂರು ಬಾರಿ ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದರು.
ಶಾಸಕರು ತಮ್ಮ ಶಕ್ತಿ ಬಳಸಿ ಬಿ ಖಾತಾ ಹಕ್ಕಿನ ಮೂಲಕವೇ ಆಸ್ತಿಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುಮತಿ ಸಿಗುವಂತೆ ಆದೇಶಕ್ಕಾಗಿ ಯತ್ನಿಸಬೇಕು. ಬಿ ಖಾತಾ ಪ್ರಮಾಣಪತ್ರ ನೀಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ಬಿ ಖಾತಾ ಪ್ರಮಾಣಪತ್ರದಿಂದ ಏನೆಲ್ಲ ಸೌಲಭ್ಯಗಳು ಸಿಗುತ್ತವೆ ಎಂಬುದನ್ನು ಜನತೆಗೆ ತಿಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಜಿಲ್ಲೆಯ ಅಭಿವೃದ್ಧಿಗೆ ಆಸಕ್ತಿಯನ್ನೇ ಹೊಂದಿಲ್ಲ ಎಂದು ಆರೋಪಿಸಿದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಪ್ರಮುಖರಾದ ಗಣಪತಿ ನಾಯ್ಕ, ನಂದನ ಸಾಗರ, ಆರ್. ಡಿ. ಹೆಗಡೆ, ಉಷಾ ಹೆಗಡೆ, ಆನಂದ ಸಾಲೇರ ಇತರರಿದ್ದರು.