

ವಿಜಯವಾಣಿ ಸುದ್ದಿಜಾಲ ಉಡುಪಿ
ಭಾಷಣಕಾರರು, ವಾಗ್ಮಿಗಳು ಹಾಗೂ ಹಿಂದು ಮುಖಂಡರಿಗೆ ನಿರ್ಬಂಧ ಹೇರುವ ಬದಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದರೆ ಗೋಹತ್ಯೆ, ಗೋ ಕಳ್ಳತನ ತಡೆಯಿರಿ. ಇದಕ್ಕಾಗಿ ವಿಶೇಷ ಕಾರ್ಯ ಪಡೆ ರಚಿಸಿ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರಿಗೆ ಸವಾಲು ಹಾಕಿದ್ದಾರೆ.
ಉಡುಪಿಯಲ್ಲಿ ಬಿಜೆಪಿ ವತಿಯಿಂದ ಸರ್ಕಾರದ ವಿರುದ್ಧ ಜೂನ್ 23ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎಷ್ಟು ಕೋಮು ಘರ್ಷಣೆ ನಡೆದಿದೆ? ಎಷ್ಟು ಗೋ ಕಳ್ಳತನ, ಗೋಹತ್ಯೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠರಲ್ಲಿ ಮಾಹಿತಿ ಕೇಳಿದ್ದೇನೆ ಎಂದರು.
ಮಂಗಳೂರಿನಲ್ಲಿ ಕೋಮು ಘರ್ಷಣೆ ನಿಗ್ರಹಕ್ಕಾಗಿ ಗೃಹಸಚಿವರು ಪೊಲೀಸ್ ಇಲಾಖೆಯಿಂದ ವಿಶೇಷ ಕಾರ್ಯ ಪಡೆ ಆರಂಭಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಕೋಮು ಸಂರ್ಷ ಇಲ್ಲದಿದ್ದರೂ ಸಹ ವಿಶೇಷ ಪಡೆಯನ್ನು ಉಡುಪಿಗೂ ಅಳವಡಿಸಿದ್ದಾರೆ. ತನ್ಮೂಲಕ ಇಲ್ಲಿನ ಹಿಂದುವಾದಿಗಳನ್ನು ಹಾಗೂ ಹಿಂದುತ್ವದ ಶಕ್ತಿಯನ್ನು ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಮ್ಮ ಪಕ್ಷ ಮತ್ತು ಹಿಂದುತ್ವ ಪ್ರಬಲವಾಗಿದ್ದು, ಆ ಶಕ್ತಿಯನ್ನು ಕುಂದಿಸಲು ಆಗದು ಎಂದರು.
ಕನ್ನಡ ನಾಡಿನವರೇ ಆದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ಹಿಂದು ಮುಖಂಡ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರಿಗೆ ಸರ್ಕಾರ ನಿರ್ಬಂಧ ಹೇರಿದೆ. ನಮ್ಮ ಜನ ನಮ್ಮ ರಾಜ್ಯದಲ್ಲೇ ಸಂಚರಿಸಬಾರದು ಎಂದರೆ ಏನು ಅರ್ಥ? ಭ್ರಷ್ಟ ಅಧಿಕಾರಿಗಳನ್ನು ಮೊದಲು ಗಡಿಪಾರು ಮಾಡಿ. ಶ್ರೀಕಾಂತ ಶೆಟ್ಟಿ ಅವರಿಗೆ ಬಾಗಲಕೋಟೆ ಜಿಲ್ಲೆ ಪ್ರವೇಶ ನಿರ್ಬಂಧವನ್ನು ಸರ್ಕಾರ ಕೂಡಲೇ ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಈ ವಿಚಾರವಾಗಿಯೂ ಪ್ರತಿಭಟಿಸಬೇಕಾಗುತ್ತದೆ ಎಂದು ಯಶ್ಪಾಲ್ ತಿಳಿಸಿದರು.