

ಶಿವಮೊಗ್ಗ: ಗೋಸಂರಕ್ಷಣೆ ಕಾಯ್ದೆಯನ್ನೇ ಕಾಂಗ್ರೆಸ್ ಆಪೋಶನ ತೆಗೆದುಕೊಂಡಿದೆ. ಗೋಮಾತೆಯನ್ನು ಉಳಿಸುವ ಹಾಗೂ ಸಕಾರಣಕ್ಕೆ ಮುಸ್ಲಿಂ ಸಮುದಾಯವನ್ನು ಎದುರು ಹಾಕಿಕೊಳ್ಳುವ ಶಕ್ತಿ ರಾಜ್ಯ ಸರ್ಕಾರಕ್ಕಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು.
ಬೆಂಗಳೂರಿನ ವಿನಾಯಕ ನಗರದಲ್ಲಿ ಕಿಡಿಗೇಡಿಗಳು ಹಸುಗಳ ಕೆಚ್ಚಲನ್ನೇ ಕುಯ್ದಿದ್ದಾರೆ. ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರಕ್ಕೆ ಶಕ್ತಿ ಇಲ್ಲ ಎಂದಾದರೆ ವಿನಾಯಕ ನಗರಕ್ಕೆ ತೆರಳಿ ಹೋರಾಟ ರೂಪಿಸಲು ಕಾರ್ಯಕರ್ತರು ಶಕ್ತರಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಹಿಂದುಗಳ ಮೇಲೆ ಆಕ್ರಮಣ ನಡೆಯುತ್ತಿರುವ ನಡುವೆ ಹಸುವಿನ ಕೆಚ್ಚಲಿಗೂ ಕತ್ತಿ ಹಾಕುತ್ತಿದ್ದಾರೆ. ವಿನಾಯಕ ನಗರದಲ್ಲಿ ಶೇ. 80ರಷ್ಟು ಮುಸ್ಲಿಮರು ವಾಸವಿದ್ದಾರೆ. ಆ ಪ್ರದೇಶದಲ್ಲಿರುವ ಅಷ್ಟು ಹಿಂದುಗಳನ್ನು ಹೊರಹಾಕುವ ಪ್ರಯತ್ನದ ಫಲವೇ ಕೆಚ್ಚಲು ಕುಯ್ದಿರುವುದು. ಅಲ್ಲಿದ್ದ ಒಂದು ಪಶುಪಾಲನಾ ಆಸ್ಪತ್ರೆಯನ್ನು ಅಲ್ಪಸಂಖ್ಯಾತರ ಬಳಕೆಗೆ ನೀಡುವ ಪ್ರಯತ್ನ ನಡೆದಿತ್ತು. ಆಗ ಹಿಂದು ಸಂಘಟನೆಗಳು ಹೋರಾಟ ನಡೆಸಿ ಆಸ್ಪತ್ರೆಯನ್ನು ಉಳಿಸಿದ್ದವು. ಇದಕ್ಕೆ ಪ್ರತೀಕಾರವಾಗಿ ಹಸುವಿನ ಕೆಚ್ಚಲು ಕುಯ್ಯಲಾಗಿದೆ ಎಂದು ದೂರಿದರು.
ವಿನಾಯಕ ನಗರದಲ್ಲಿ ಡ್ರಗ್ಸ್ ಮಾಫಿಯಾ ಮಿತಿಮೀರಿದೆ. ಹೀಗಾಗಿ ಇಂತಹ ಘಟನೆಗಳು ನಡೆಯುತ್ತಿವೆ. ಸರ್ಕಾರ ಸತ್ತು ಹೋಗಿದೆ. ರಕ್ಷಣಾ ಇಲಾಖೆಯೂ ಇಲ್ಲವೇ? ಬಿಜೆಪಿ ಅಧಿಕಾರದಲ್ಲಿದ್ದಾಗ ಗೋಶಾಲೆಗಳ ನಿರ್ಮಾಣಕ್ಕೆ ಆದೇಶ ಮಾಡಿತ್ತು. ಆದರೆ ಈಗ ರಾಜ್ಯ ಸರ್ಕಾರ 70 ಗೋಶಾಲೆ ನಿರ್ಮಾಣಕ್ಕೆ ಕತ್ತರಿ ಹಾಕಿದೆ. ಇದು ಗೋವುಗಳ ಬಗ್ಗೆ ಸರ್ಕಾರಕ್ಕಿರುವ ಕಾಳಜಿಗೆ ನಿದರ್ಶನ ಎಂದರು.
ಸೂಡಾ ಮಾಜಿ ಅಧ್ಯಕ್ಷ ಎನ್.ಜಿ.ನಾಗರಾಜ್, ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.