ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ

Congress government mired in corruption
Published on

ರಟ್ಟಿಹಳ್ಳಿ: ರಾಜ್ಯದಲ್ಲಿ ಆಡಳಿತ ಕುಸಿದು ಹೋಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ವೈಫಲ್ಯ ಮುಚ್ಚಿಕೊಳ್ಳಲು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದಲ್ಲಿ ಗುರುವಾರ ಬಿಜೆಪಿ ಕಚೇರಿ ಉದ್ಘಾಟನೆ ಹಾಗೂ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸೆಪ್ಟೆಂಬರ್​ನಲ್ಲಿ ಕ್ರಾಂತಿ, ಮುಖ್ಯಮಂತ್ರಿ ಬದಲಾವಣೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ವಿನಃ ವಿರೋಧ ಪಕ್ಷದವರು ಅಲ್ಲ. ಕಾಂಗ್ರೆಸ್ ಸರ್ಕಾರ ಜನರ ಮೇಲೆ ತೆರಿಗೆ ಭಾರ ಹಾಕುತ್ತ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿವೆ ಎಂದರು.

ಕಾರ್ಯಕರ್ತರು ನಿಷ್ಠೆಯಿಂದ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದಲ್ಲಿ ಮುಂಬರುವ ತಾಪಂ, ಜಿಪಂ, ಗ್ರಾಪಂ ಮತ್ತು ಎಲ್ಲ ನಗರ ಸ್ಥಳೀಯ ಚುನಾವಣೆಗಳಲ್ಲಿ ಗೆಲುವು ಸಾಧ್ಯವಾಗಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಹಿರೇಕೆರೂರ ಕ್ಷೇತ್ರ ಮಾಜಿ ಸಚಿವ ಬಿ.ಸಿ. ಪಾಟೀಲರ ಅವಧಿಯಲ್ಲಿ ಅಭಿವೃದ್ಧಿ ಪರ್ವವನ್ನೇ ಕಂಡಿದೆ. ಕಾಂಗ್ರೆಸ್ ಸರ್ಕಾರದ ವಿಫಲ ಆಡಳಿತ ಖಂಡಿಸಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಪ್ರತಿಭಟನೆಗೆ ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕು. ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದರು.

ರಟ್ಟಿಹಳ್ಳಿ ತಾಲೂಕು ಬಿಜೆಪಿ ನೂತನ ಅಧ್ಯಕ್ಷ ದೇವರಾಜ ನಾಗಣ್ಣನವರ, ಹಿರೇಕೆರೂರ ತಾಲೂಕು ನೂತನ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ ಮಾತನಾಡಿ, ಜಾತಿ, ಅಧಿಕಾರ, ಹಣ ಬಲಕ್ಕೆ ಮಣೆ ಹಾಕದೇ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಗುರುತಿಸುತ್ತದೆ. ಎಲ್ಲ ಮುಖಂಡರು ಮತ್ತು ಕಾರ್ಯಕರ್ತರ ಸಲಹೆ ಪಡೆದು ಪಕ್ಷ ಸಂಘಟನೆಗೆ ನಿರಂತರವಾಗಿ ಶ್ರಮಿಸುತ್ತೇವೆ ಎಂದರು.

ಮಾಜಿ ಶಾಸಕ ಶಿವರಾಜ ಸಜ್ಜನ, ಫಾಲಾಕ್ಷಗೌಡ್ರು ಪಾಟೀಲ, ಎನ್.ಎಂ. ಈಟೇರ, ಮಾಲತೇಶ ಗಂಗೋಳ, ಪರಮೇಶ್ವರಪ್ಪ ಹಲಗೇರಿ, ಲಿಂಗರಾಜ ಚಪ್ಪರದಹಳ್ಳಿ, ಆನಂದಪ್ಪ ಹಾದಿಮನಿ, ಸಂದೀಪ ಪಾಟೀಲ, ಮಾಲತೇಶ ಬೆಳಕೇರಿ, ಶಿವಕುಮಾರ ತಿಪ್ಪಶೆಟ್ಟಿ ಮಾತನಾಡಿದರು.

ಆರ್.ಎನ್. ಗಂಗೋಳ, ಶಂಭಣ್ಣ ಗೂಳಪ್ಪನವರ, ಮಹೇಶಪ್ಪ ಚಳಗೇರಿ, ಜಟೆಪ್ಪ ಮಳಗೊಂಡರ, ಸುಶೀಲ ನಾಡಗೇರ, ರವಿ ಹದಡೇರ, ಶ್ರೀನಿವಾಸ ಭೈರಪ್ಪನವರ, ಕೆ.ವಿ. ವರಹದ, ಬಸವರಾಜ ಆಡಿನವರ, ರಾಘವೇಂದ್ರ ಹರವಿಶೆಟ್ಟರ್, ಸಿದ್ದು ಹಲಗೇರಿ, ಪ್ರಶಾಂತ ದ್ಯಾವಕ್ಕಳವರ, ಮನೋಜ ಗೋಣೆಪ್ಪನವರ, ಗಣೇಶ ಅಡ್ಮನಿ, ಪ್ರಶಾಂತ ಕೊರವರ, ಪ್ರಭಾವತಿ ಕುಲ್ಕರ್ಣಿ, ಸರೋಜಾ ಹುರಕಡ್ಲಿ, ವೀರನಗೌಡ ಯಡಚಿ, ರಾಜು ಬಟ್ಲಕಟ್ಟಿ, ಮಂಜು ತಳವಾರ, ಬಸವರಾಜ ಕಟ್ಟಿಮನಿ, ಜಾಫರ್ ಖಾಜಿ, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net