

ಚಿತ್ರದುರ್ಗ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 5 ವರ್ಷ ಸುಭದ್ರವಾಗಿ ಇರಲಿದೆ. ಏಕೆಂದರೆ ಆಪರೇಷನ್ ಕಮಲಕ್ಕೆ ಒಳಗಾಗುವವ ಶಾಸಕರು ನಮ್ಮಲ್ಲಿ ಇಲ್ಲ ಎಂದು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏಳೆಂಟು ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂಬ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ, ಅವರು ಹಿರಿಯ ನಾಯಕರಿದ್ದು, ಹೇಳಿಕೆಗಳಿಗೆ ಪ್ರತಿಕ್ರಿಯಿಸಲಾರೆ ಎಂದರು.
ಇನ್ನೂ 20 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ಹಿಂದೆ ಆಪರೇಷನ್‌ಗೆ ಒಳಗಾಗಿ ಪಕ್ಷಕ್ಕೆ ಮೋಸ ಮಾಡಿದವರಿಗೆ ಜನರೇ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಶಾಸಕರು ವಸೂಲಿಗೆ ನಿಂತಿದ್ದಾರೆ ಎಂಬ ಬಿಜೆಪಿ ಮುಖಂಡ ಸಿ.ಟಿ.ರವಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, 40 ಪರ್ಸೆಂಟ್ ಕಮಿಷನ್ ವಿಚಾರಕ್ಕೆ ಅಧಿಕಾರ ಕಳೆದುಕೊಂಡು ಭ್ರಮನಿರಸನರಾಗಿ ಮನಬಂದಂತೆ ಮಾತಾಡುತ್ತಿದ್ದು, ಬಾಡಿಗೆ ಗುತ್ತಿಗೆದಾರರಿಂದ ಸರ್ಕಾರದ ವಿರುದ್ಧ ಆರೋಪ ಮಾಡಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಉತ್ತರಿಸಿದ್ದಾರೆ ಎಂದರು.