ಗೊಬ್ಬರ ನೀಡದೇ ನುಣುಚಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ

New Munenakoppa New
Published on

ಹುಬ್ಬಳ್ಳಿ : ರೈತರಿಗೆ ಯೂರಿಯಾ ಗೊಬ್ಬರ ಸಿಗದೇ ಇರುವುದಕ್ಕೆ ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರೈತರ ಬೇಡಿಕೆ ಈಡೇರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉದ್ದೇಶದಿಂದ ‘ಬೆಂಕಿ ಹತ್ತಿದಾಗ ಬಾವಿ ತೋಡುವ’ ಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆರೋಪಿಸಿದ್ದಾರೆ.

ರಾಜ್ಯದಲ್ಲಿ ರೈತರಿಗೆ ಎಷ್ಟು ಪ್ರಮಾಣದ ಗೊಬ್ಬರ ಬೇಕು ಎಂಬುದನ್ನ ರಾಜ್ಯ ಸರ್ಕಾರ ಕೇಂದ್ರಕ್ಕೆ ಕೇಳಿಕೊಳ್ಳಬೇಕು. ಆದರೆ, ಕಾಂಗ್ರೆಸ್ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸದೇ ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನ ನಡೆಸುತ್ತಿದೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.

ಗೋಲಿಬಾರ್, ಲಾಠಿಚಾರ್ಜ್ ಸೇರಿದಂತೆ ನೂರಾರು ಪ್ರಕರಣ ದಾಖಲಿಸಿರುವುದು ಯಾವ ಸರ್ಕಾರ ಎಂಬುದು ರೈತರಿಗೆ ಗೊತ್ತಿರುವ ವಿಷಯ ಎಂದು ಹೇಳಿದ್ದಾರೆ.

ರೈತರ ಬೇಡಿಕೆಗೆ ಅನುಗುಣವಾಗಿ ಗೊಬ್ಬರ ಸಿಗದೇ ಹೋದರೆ, ರೈತರ ಜತೆಗೆ ತಾವು ಸಹ ಹೋರಾಟದ ಹಾದಿ ಹಿಡಿಯಬೇಕಾಗತ್ತದೆ ಎಂದು ಶಂಕರ ಪಾಟೀಲಮುನೇನಕೊಪ್ಪ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡೂವರೆ ವರ್ಷದಿಂದ ರೈತರು ಬೆಳೆಹಾನಿ, ಬೆಳೆ ಪರಿಹಾರ ಮತ್ತು ಬಿದ್ದ ಮನೆಗಳಿಗೆ ಪರಿಹಾರ ಕೊಡಲು ಆಗುತ್ತಿಲ್ಲ. ಕೇವಲ ಗ್ಯಾರಂಟಿ ಮಾತನಾಡುತ್ತ ಹೋದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಳಿದು ಹೋಗುವುದು ಗ್ಯಾರಂಟಿ ಎಂದು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net