

ಶಿವಮೊಗ್ಗ: ಪ್ರತಿಪಕ್ಷದಲ್ಲಿದ್ದಾಗ ರೈತರ ಪರವಾಗಿ ಪಾದಯಾತ್ರೆ ಮಾಡಿ ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ರೈತರ ಹಿತ ಮರೆತವರು ರೈತ ಪರ ಹೋರಾಟ ಮರೆತು ಕೇವಲ ಹಾರಾಟದಲ್ಲೇ ಸಮಯ ಕಳೆಯುತ್ತಿದ್ದಾರೆ ಎಂದು ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಬಿಜೆಪಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಶಿಷ್ಟಾಚಾರದ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರ ಸಮಸ್ಯೆ ಗೊತ್ತಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು. ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದರು.
ರೈತರು ಬೆಳೆದ ಅಡಕೆ, ಶುಂಠಿಯನ್ನು ಅಧಿಕಾರಿಗಳು ನಾಶಪಡಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಜನರೇ ಬುದ್ಧಿ ಕಲಿಸುವ ಸಮಯ ಬರಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಲ್ಲಿದ್ದಾಗ ಅನೇಕ ರೈತಪರ ಕಾರ್ಯಕ್ರಮಗಳನ್ನು ರೂಪಿಸಿತ್ತು. ಜಿಲ್ಲೆಯ ಸಾವಿರಾರು ಬಗರ್‌ಹುಕುಂ ರೈತರು ನೆಮ್ಮದಿಯಿಂದಿದ್ದರು. ಕಾನೂನು ತೊಡಕಿದ್ದರೂ ಅಧಿಕಾರಿಗಳು ರೈತರ ತಂಟೆಗೆ ಹೋಗುತ್ತಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಹಳ್ಳಿಯಲ್ಲೂ ಕಂದಾಯ ಮತ್ತು ಅರಣ್ಯಾಧಿಕಾರಿಗಳು ಕೋರ್ಟ್ ನೆಪ ಹೇಳಿಕೊಂಡು ಬೆಳೆ ನಾಶಮಾಡಿ, ಒಕ್ಕಲೆಬ್ಬಿಸುವ, ನೋಟಿಸ್ ಜಾರಿಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸೀನಪ್ಪ ಶೆಟ್ಟಿ ವೃತ್ತದಿಂದ ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಡಿಸಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳ ನೂರಾರು ಕಾರ್ಯಕರ್ತರು, ರೈತರು ಭಾಗವಹಿಸಿದ್ದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನವೀನ್, ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.