ಕಾಂಗ್ರೆಸ್ ಸರ್ಕಾರ ಜನರಿಗೆ ಹೊರೆಯಾಗಿದೆ

Pralhad Joshi 3
Published on

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರ ಜತೆಗೆ ಎಲ್ಲದರ ದರ ಹೆಚ್ಚಿಸಿ ಜನರಿಗೆ ಹೊರೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಿ ಅದಕ್ಕಿಂತ ಹೆಚ್ಚಾದರೆ ಪ್ರತಿ ಯುನಿಟ್​ಗೆ 4ರಿಂದ 7 ರೂ. ಗೆ ಹೆಚ್ಚಿಸಿದೆ. ಡೀಸೆಲ್, ಪೆಟ್ರೋಲ್ ಮೇಲೆ ತೆರಿಗೆ ವಿಧಿಸಿದೆ. ಆಸ್ತಿ ನೋಂದಣಿ, ಮದ್ಯ ಹಾಗೂ ಇತ್ತೀಚೆಗೆ ಹಾಲಿ ದರವನ್ನೂ ಹೆಚ್ಚಿಸಿದೆ ಎಂದರು.

ಸಾರಿಗೆ ಸಂಸ್ಥೆ ಲಾಭದಲ್ಲಿ ಇದ್ದರೆ 2 ಸಾವಿರ ಕೋಟಿ ಸಾಲ ಏಕೆ ಪಡೆಯಬೇಕು ? ಶಕ್ತಿ ಯೋಜನೆಯಿಂದ ಸಂಸ್ಥೆ ಲಾಭದಲ್ಲಿದ್ದರೆ ಸಾಲ ಪಡೆಯುವ ಅವಶ್ಯಕತೆ ಸರ್ಕಾರಕ್ಕೆ ಏಕೆ ಬಂದಿದೆ ? ಸರ್ಕಾರದ ಬಳಿ ಹಣ ಇಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಅಗತ್ಯ ವಸ್ತುಗಳ ದರ ಹೆಚ್ಚಿಸಿ. ಗ್ಯಾರಂಟಿಗಳನ್ನು ಉಚಿತ ನೀಡುತ್ತೇವೆ ಎಂದು ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಬಿಟ್ಟು ಮುಖ್ಯಮಂತ್ರಿ ಅವರು ಎಲ್ಲ ಸಚಿವರೊಂದಿಗೆ ಔತಣಕೂಟ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ತಂಡ ಕಟ್ಟಿಕೊಂಡಿದ್ದಾರೆ. ಆ ಪಕ್ಷದ ನಾಯಕರು ಅಧಿಕಾರಕ್ಕಾಗಿ ಕೀಳು ಮಟ್ಟಕ್ಕೆ ಹೋಗಲು ಹಿಂಜರಿಯುವುದಿಲ್ಲ ಎಂದು ಆರೋಪಿಸಿದರು.

ಮೈಸೂರು ರಸ್ತೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ಇಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡಪಂಥೀಯ ವಿಚಾರಧಾರೆಯವರು. ಎಡಪಂಥೀಯವರು ಸಹ ಇದಕ್ಕೆ ವಿರೋಧ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಹಗರಣಗಳ ಬಗ್ಗೆ ನಾವು ಪದೇ ಪದೆ ಹೇಳಿದ್ದೇವೆ. ದೀರ್ಘ ಅಧಿಕಾರದಲ್ಲಿ ಇದ್ದವರು ಚಿಲ್ಲರೆ ವಿಚಾರದಲ್ಲಿ ಸಿಲುಕಬಾರದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net