

ಭಟ್ಕಳ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿತ್ಯ ಒಂದಲ್ಲ ಒಂದು ಭ್ರಷ್ಟ ವ್ಯವಹಾರ ಮಾಡಿಕೊಂಡು ಬರುತ್ತಿದೆ. ಉದಾಹರಣೆಗೆ ವಾಲ್ಮೀಕಿ ನಿಗಮದಿಂದ 189 ಕೋಟಿ ಹಾಗೂ ಎಸ್ಸಿ, ಎಸ್ಟಿ ನಿಗಮದಿಂದ 12 ಸಾವಿರ ಕೋಟಿ ರೂ. ಹಣವನ್ನು ಅವ್ಯವಹಾರ ಮಾಡಿದ್ದಾರೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ನಿಗಮದ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಎಂದು ಹೇಳಿದರು.
ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಹಿಂಪಡೆಯುವಂತೆ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಕಾರಿಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ 50 ಪೈಸೆ ಹಾಕಿ ಜನರಿಂದ 50 ರೂ. ಪಡೆಯುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ನಾವೆಲ್ಲ ಎಚ್ಚೆತ್ತುಕೊಂಡು ಎಂದಿಗೂ ಅಧಿಕಾರಕ್ಕೆ ಬರದಂತೆ ಮಾಡಬೇಕು ಎಂದರು.
ಶಿವಾನಿ ಶಾಂತರಾಮ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ ಉದ್ಧಟತನ ತೋರಿಸುತ್ತಿದೆ ಎಂದು ಆರೋಪಿಸಿದರು.
ಬಳಿಕ ಉಪವಿಭಾಗಾಧಿಕಾರಿ ಡಾ. ನಯನ ಮನವಿ ಸ್ವೀಕರಿಸಿದರು. ತಹಸೀಲ್ದಾರ್ ನಾಗರಾಜ ನಾಯ್ಕಡ ಇದ್ದರು.
ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ದಿನೇಶ ನಾಯ್ಕ, ಶೇಷಗಿರಿ ನಾಯ್ಕ, ಪಾಂಡುರಂಗ ನಾಯ್ಕ ಆಸರಕೇರಿ, ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.