ಬೆಳಗಾವಿ ಸಮಾವೇಶಕ್ಕೆ 25 ಸಾವಿರ ಜನರು,  ಕಾಂಗ್ರೆಸ್ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ,  ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿಕೆ

IMG_20241220_130203_637-1.jpg
Published on

ಹುಬ್ಬಳ್ಳಿ: ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಸಮಾವೇಶಕ್ಕೆ ಧಾರವಾಡ ಜಿಲ್ಲೆಯಿಂದ ಸುಮಾರು 25 ಸಾವಿರ ಜನರು ತೆರಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಇಲ್ಲಿಯ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಹುಬ್ಬಳ್ಳಿ ಧಾರವಾಡ ಗ್ರಾಮೀಣ ಮತ್ತು ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಸಮಾವೇಶದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಅಹಿಂಸೆಯಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧಿ ಅವರು ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿದ್ದರು. ಇದರ ಸ್ಮರಣಾರ್ಥ ಏರ್ಪಡಿಸಿರುವ ಗಾಂಧಿ ಭಾರತ ಸಮಾವೇಶದಲ್ಲಿ ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ. ಪ್ರಜಾಪ್ರಭುತ್ವ ಉಳಿಸುವ ಸಲುವಾಗಿ ಇಂತಹ ಕಾರ್ಯಕ್ರಮ ಸ್ಮರಣೀಯವಾಗಿಸುವ ಗುರಿ ಹೊಂದಲಾಗಿದೆ ಎಂದರು.

ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಅಗೌರವದ ಮಾತುಗಳನ್ನು ಕೇಂದ್ರ ಸಚಿವ ಅಮಿತ್ ಶಾ ಆಡಿದ್ದಾರೆ. ಇದನ್ನು ಕಾಂಗ್ರೆಸ್ ಈಗಾಗಲೇ ಖಂಡಿಸಿ ಅವರ ವಿರುದ್ಧ ಹೋರಾಟ ಮಾಡುತ್ತಿದೆ. ಮುಂದೆಯೂ ಪ್ರತಿಭಟನೆ ನಡೆಯಲಿದೆ ಎಂದರು.

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಬಿಜೆಪಿ ನಾಯಕರು ಇದಕ್ಕೆ ಆರೋಗ್ಯ ಸಚಿವರು ಕಾರಣ ಎಂದು ದೂರಿದರು. ಆದರೆ, ವಾಸ್ತವ ಬೇರೆ ಇದೆ. ಅದರ ಬಗ್ಗೆ ಚರ್ಚೆ ಮಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಗೆ ನೀಡಿದ ವ್ಯಾಕ್ಸಿನ್ ನಿಂದ ಅನೇಕ ಜನರು ತೀರಿಕೊಂಡಿದ್ದಾರೆ. ವ್ಯಾಕ್ಸಿನ್ ಗುಣಮಟ್ಟದ್ದಾಗಿಲ್ಲ ಎಂದು ಡಬ್ಲೂಎಚ್ಒ ವರದಿ ಹೇಳಿದೆ. ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಲಾಡ್ ಪ್ರಶ್ನಿಸಿದರು.

ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಮಾತನಾಡಿ, ಬೆಳಗಾವಿ ಸಮಾವೇಶಕ್ಕೆ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಕೋರಿದರು.

ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾ್ ಹಳ್ಳೂರ, ಅನಿಲ ಪಾಟೀಲ, ಮಾಜಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಎಂ.ಎಸ್. ಅಕ್ಕಿ, ಎ.ಎಂ. ಹಿಂಡಸಗೇರಿ, ಮುಖಂಡರಾದ ನಾಗರಾಜ ಗೌರಿ, ವಸಂತ ಲದವಾ, ವಿನೋದ ಅಸೂಟಿ, ದೀಪಕ ಚಿಂಚೋರೆ, ಶರಣಪ್ಪ ಕೊಟಗಿ, ಪಾಲಿಕೆ ಸದಸ್ಯರು, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net