ಹೊಂದಾಣಿಕೆ ರಾಜಕಾರಣ ಬಿಡದ ಹೊರತು ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ

Congress
Published on

ತುಮಕೂರು: ಹೊಂದಾಣಿಕೆ ರಾಜಕಾರಣ ಬಿಡದ ಹೊರತು ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ. ಹಾಗಾಗಿ, ಎಲ್ಲಾ ಕಾಂಗ್ರೆಸ್ಸಿಗರು ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ದವಾಗಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೆಂಚಮಾರಯ್ಯ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ 138ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಈ ವೇಳೆ ಮಾತನಾಡಿದ ಅವರು,ಸ್ವಾತಂತ್ರವನ್ನು ಪಡೆಯುವುದಕ್ಕಾಗಿ ಚಳವಳಿ ರೂಪದಲ್ಲಿ ಹುಟ್ಟಿಕೊಂಡ ಕಾಂಗ್ರೆಸ್ ಸಂಘಟನೆ, ಸ್ವಾತಂತ್ರ ನಂತರದಲ್ಲಿ ಒಂದು ಪಕ್ಷವಾಗಿ ಮುಂದುವರೆದಿದೆ. ಶಿಕ್ಷಣ, ಸಹಬಾಳ್ವೆಯನ್ನೇ ಗುರಿಯಾಗಿಟ್ಟುಕೊಂಡು ಇಂದಿಗೂ ತಾನು ನಂಬಿದ ಸಿದ್ಧಾಂತ ಮತ್ತು ಹಾಕಿಕೊಂಡಿರುವ ಗುರಿಯತ್ತ ಸಾಗಲು ಕಾರ್ಯನಿರ್ವ ಹಿಸುತ್ತಿರುವ ಕಾಂಗ್ರೆಸ್‌ನ ತತ್ವ ಸಿದ್ದಾಂತಗಳನ್ನು ಮೊದಲು ನಮ್ಮವರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಧರ್ಮ, ಜಾತಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಬಿಜೆಪಿಯನ್ನು ತೊಲಗಿಸುವ ಕೆಲಸ ಅರಂಭವಾಗಿದೆ.ಇದೇ ಒಗ್ಗಟ್ಟನ್ನು ನಾವು ಮುಂದಿನ ದಿನಗಳಲ್ಲಿಯೂ ಕಾಪಾಡಿಕೊಂಡು ಹೊಗುವ ಮೂಲಕ ಪಕ್ಷವನ್ನು ಬಲಗೊಳಿಸಬೇಕಿದೆ ಎಂದು ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರ ಗೌಡ ಹೇಳಿದರು.

ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಈ ದೇಶದ ಪ್ರಜೆಗಳಿಗೆ ಅನ್ಯಾಯ,ತೊಂದರೆಯಾದಂತೆ ಸಂದರ್ಭದಲ್ಲಿ ಜನರ ಜತೆಗೆ ನಿಲ್ಲುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ ಎಂದು ತಿಳಿಸಿದರು.

ಫ್ಲೆಕ್ಸ್, ಬ್ಯಾನರ್‌ಗಳಿಗೆ ಮಾತ್ರ ಮುಖಂಡರು ಸಿಮಿತವಾಗದೆ ಪಕ್ಷ ಕಟ್ಟಲು ಕಾರ್ಯಕರ್ತರನ್ನು ಹುರಿದುಂಬಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್, ವಕ್ತಾರ ನಿಕೇತ್ ರಾಜ್ ಮಾರ್ಯ, ಎಸ್.ಷಫಿಅಹಮದ್, ಅಸ್ಲಾಂಪಾಷ, ಆರ್.ರಾಮಕೃಷ್ಣ, ಪಂಚಾರಕ್ಷಯ್ಯ,ನಾಗಮಣಿ ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ವಾಲೆಚಂದ್ರಯ್ಯ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಸೈಯದ್ ಫಯಾಜ್, ನರಸಿಂಹಮೂರ್ತಿ, ಗಿರೀಶ್, ರಂಗಶಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net