ಶೇ. 40ರ ಕಮಿಷನ್ ಆರೋಪಕ್ಕೆ ದಾಖಲೆ ನೀಡದ ಕಾಂಗ್ರೆಸ್

mng- sep 14- Basavaraja Bommayi
Published on

ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರ ಶೇ. 60ರಷ್ಟು ಕಮಿಷನ್ ಪಡೆಯುತ್ತಿದೆ ಎಂಬ ಆರೋಪಕ್ಕೆ ದಾಖಲೆ ಕೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಶೇ. 40ರ ಕಮಿಷನ್ ಆರೋಪಕ್ಕೆ ಇದುವರೆಗೂ ದಾಖಲೆ ನೀಡಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನಸಾಮಾನ್ಯರಿಗೆ ಗುತ್ತಿಗೆದಾರರಿಗೆ ಭ್ರಷ್ಟಾಚಾರದ ಬಿಸಿ ಮುಟ್ಟಿದೆ. ಯಾವುದೇ ಇಲಾಖೆಯಲ್ಲಿ ಜನರ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು.

ಬಸ್ ದರ ಏರಿಕೆ ಜನರಲ್ಲಿ ಆಕ್ರೋಶ ಮೂಡಿಸಿದೆ. ಶಕ್ತಿ ಯೋಜನೆಗೆ ನೀಡಬೇಕಾದ ಹಣವನ್ನು ಸರ್ಕಾರ ನೀಡುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಣ ಮಾಡಲಾಗದೇ ಜನರ ಮೇಲೆ ತೆರಿಗೆ ಭಾರ ಹಾಕಲಾಗುತ್ತಿದೆ. ಸಾರಿಗೆ ಬಸ್ ದರ ಅಷ್ಟೇ ಅಲ್ಲದೇ, ವಿದ್ಯುತ್, ಹಾಲು. ಸ್ಟಾ್ಯಂಪ್ ಡ್ಯೂಟಿ, ಮೋಟರ್ ವೆಹಿಕಲ್ ತೆರಿಗೆ, ಪೆಟ್ರೋಲ್-ಡೀಸೆಲ್ ಸೇರಿದಂತೆ ಹಲವಾರು ದೈನಂದಿನ ವಸ್ತುಗಳ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಏರಿಸಿದೆ ಎಂದು ದೂರಿದರು.

ಜನ ಸಾಮಾನ್ಯರು ಬಳಸುವ ಜಲ್ಲಿಕಲ್ಲಿನ ಮೇಲೆ ತೆರಿಗೆ, ಪಶ್ಚಿಮ ಘಟ್ಟದಿಂದ ಬರುವ ನೀರಿನ ಮೇಲೆ ತೆರಿಗೆ ಹಾಕಲು ಯೋಚನೆ ಮಾಡಿದ್ದಾರೆ. ಗಾಳಿಗೆ ತೆರಿಗೆ ಹಾಕುವ ದಿನಗಳು ದೂರ ಇಲ್ಲ. ಇದೊಂದು ದುರಾಡಳಿತದ ಸರ್ಕಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಸಾಕಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಈಗಿನ ಸರ್ಕಾರ ಒಂದೇ ಒಂದು ರಸ್ತೆಯನ್ನೂ ಅಭಿವೃದ್ಧಿಪಡಿಸಿಲ್ಲ ಎಂದು ಟೀಕಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಬದುಕಿದ್ದಾಗ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎಂಬುದು ಇಂದಿನ ಜನರಿಗೆ ಗೊತ್ತಿದೆ. ಸಂಸತ್ತಿನಲ್ಲಿ ಎರಡು ದಿನ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಸಂವಿಧಾನ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ಎಂಬುದು ಬಹಿರಂಗಗೊಂಡಿದೆ. ತಾವು ಮಾಡಿರುವ ಅಪರಾಧವನ್ನು ಮುಚ್ಚಿ ಹಾಕಿಕೊಳ್ಳಲು ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚುವ ಕೆಲಸ ಕಾಂಗ್ರೆಸ್​ನವರು ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net