ಪ್ರಾಮಾಣಿಕರನ್ನು ಗುರುತಿಸುವಲ್ಲಿ ಕಾಂಗ್ರೆಸ್​ ವಿಫಲ

1 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಂಗ್ರೆಸ್​ ಪಕ್ಷ ಇಂದು ತನ್ನ ತತ್ವ- ಸಿದ್ಧಾಂತಗಳಿಂದ ವಿಮುಖವಾಗಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಯಾವುದೇ ನಾಯಕರಲ್ಲಿ ಬದ್ಧತೆ ಇಲ್ಲ ಎಂದು ಹಿರಿಯ ವಕೀಲ, ಬಿಜೆಪಿ ಮುಖಂಡ ಪಿ.ಎಚ್​. ನೀರಲಕೇರಿ ದೂರಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿದ್ದು, ಪ್ರಾಮಾಣಿಕರ ಶ್ರಮ ಗುರುತಿಸುವಲ್ಲಿ ವಿಫಲವಾಗಿದೆ. ಪ್ರಸ್ತುತ ಕಾಂಗ್ರೆಸ್​ ಪಕ್ಷದಲ್ಲಿ ಸಮಾಜದ ಹಿತ ಕಾಯುವ ಬದಲು ಸ್ವಾರ್ಥ ಪರ ಮತ್ತು ಬೇಜವಾಬ್ದಾರಿ ಮನಸ್ಥಿತಿ ಹೆಚ್ಚಿದೆ. ಇದೇ ಕಾರಣಕ್ಕೆ ನಾನು ಕಾಂಗ್ರೆಸ್​ ತೊರೆಯಬೇಕಾಯಿತು ಎಂದರು.
ಸಮರ್ಥ ನಾಯಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ನಮ್ಮ ಆಶಯ. ಕ್ಷೇತ್ರದ ಜನರೂ ಪ್ರಬುದ್ಧರಿದ್ದು, ಈ ಬಾರಿ ಪ್ರಲ್ಹಾದ ಜೋಶಿ ಗೆಲುವು ಖಂಡಿತ. ಹಿಂದಿನ ಸಂಸದರು ಕ್ಷೇತ್ರಕ್ಕೆ ತಂದ ಅನುದಾನಕ್ಕೆ ಹೋಲಿಸಿದರೆ ಪ್ರಲ್ಹಾದ ಜೋಶಿ ಅವಧಿಯಲ್ಲೇ 25 ಸಾವಿರ ಕೋಟಿ ರೂ. ಅನುದಾನ ಬಂದಿದೆ. ಕ್ಷೇತ್ರದ ಅಭಿವೃದ್ಧಿ ಮತ್ತು ಜನಪರ ಕಾಳಜಿ ಹೊಂದಿರುವ ಅಭ್ಯಥಿರ್ ಜೋಶಿ. ಅವರನ್ನು ಆಯ್ಕೆ ಮಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
ದೇಶದಲ್ಲಿನ ವ್ಯಕ್ತಿಯ ಆಸ್ತಿ ಹಂಚಿಕೆ ಮಾಡುವುದಾದರೆ ಮೊದಲು ಕಾಂಗ್ರೆಸ್​ ನಾಯಕರ ಆಸ್ತಿ ಹಂಚಿಕೆಯಾಗಲಿ. ಕಾಂಗ್ರೆಸ್​ ನಾಯಕರು ಆಸ್ತಿಯನ್ನು ಆಯಾ ಸಮುದಾಯದ ಜನರಿಗೆ ಹಂಚುವುದಾಗಿ ಘೋಷಿಸಬೇಕು ಎಂದು ಒತ್ತಾಯಿಸಿದ ಅವರು, ಮಹಾದಾಯಿ ಅನುಷ್ಠಾನ ವಿಚಾರದಲ್ಲಿ ವಿಳಂಬವಾಗಿದೆ. ಆದರೂ ಪ್ರಲ್ಹಾದ ಜೋಶಿ ಜಾರಿಗೆ ತರಲು ಬದ್ಧ ಎಂದು ಶಪಥ ಮಾಡಿದ್ದಾರೆ. ಹೀಗಾಗಿ ಮಹಾದಾಯಿ ಜಾರಿಯಾಗಬೇಕಾದರೆ ಜೋಶಿ ಗೆಲುವು ಸಾಧಿಸಬೇಕು ಎಂದರು.
ಮುಖಂಡರಾದ ಮೋಹನ ರಾಮದುರ್ಗ, ರಾಜು ಮಸವಳ್ಳಿ ಇತರರು, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net