ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಸಮಾಪ್ತಿ - ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ

GVT = AMIT SHA
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಚಾಲನೆ ನೀಡಿದರು. ಕೇಂದ್ರ ಸಚಿವ ಭಗವಂತ ಕೂಬಾ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಕೆ.ಶಿವನಗೌಡ ನಾಯಕ, ಡಾ.ಶಿವರಾಜ ಪಾಟೀಲ್, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ತುಂಗಭದ್ರಾ ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ರಾಯಚೂರು
ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್ ಸಮಾಪ್ತಿಯಾಗುತ್ತಿದೆ. ದೇಶದ ಜನರು ಮೋದಿ ಜತೆ ಮುನ್ನಡೆಯಲು ನಿರ್ಧರಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.

ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ 4,283 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಭಾನುವಾರ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಇತ್ತೀಚೆಗೆ ಜರುಗಿದ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿಯೂ ಕಾಂಗ್ರೆಸ್ ಐದು ಸ್ಥಾನ ಗೆಲ್ಲಲೂ ಸಾಧ್ಯವಾಗದೆ ನೆಲ ಕಚ್ಚಿದೆ. ಕಾಂಗ್ರೆಸ್‌ನಿಂದ ಒಳ್ಳೆಯ ಆಡಳಿತ ನೀಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ವ್ಯಾಪಕ ಭ್ರಷ್ಟಾಚಾರ ಮಾಡಿದ್ದು, ಕರ್ನಾಟಕವನ್ನು ಎಟಿಎಂನಂತೆ ಮಾಡಿಕೊಂಡು ದೋಚಿದ ದುಡ್ಡನ್ನು ದೆಹಲಿಗೆ ಕಳುಹಿಸುತ್ತಾ ಬಂದಿದೆ.

ಕಳೆದ ಚುನಾವಣೆಯಲ್ಲಿ 104 ಸೀಟುಗಳನ್ನು ಗೆಲ್ಲಿಸಿ ಬಿ.ಎಸ್.ಯಡಿಯೂರಪ್ಪಗೆ ಬಲ ಕೊಟ್ಟಿದ್ದೀರಿ. ಆದರೆ, ಕಡಿಮೆ ಸೀಟು ಗಳಿಸಿದರೂ ಜೆಡಿಎಸ್, ಕಾಂಗ್ರೆಸ್‌ನ ಬೆಂಬಲ ಪಡೆದು ದುರ್ಬಲ ಸರ್ಕಾರ ನೀಡಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ನೀಡಬೇಕು. ಪ್ರಧಾನಿ ಮೋದಿ ಉತ್ತಮ ಆಡಳಿತದಿಂದಾಗಿ ಭಾರತ ಆರ್ಥಿಕ ಸ್ಥಿತಿಯಲ್ಲಿ 11ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿದೆ. ಮೊಬೈಲ್ ಉತ್ಪಾದನೆಯಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ. ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ನಮ್ಮ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಭಯೋತ್ಪಾದಕರನ್ನು ಬಗ್ಗು ಬಡಿದಿದ್ದಾರೆ. ದೇಶವನ್ನು ಸುರಕ್ಷಿತವಾಗಿಡಲು ಮೋದಿಯಿಂದ ಮಾತ್ರ ಸಾಧ್ಯ ಎಂದರು.

ಕೋವಿಡ್ ಸಂದರ್ಭ ಎಲ್ಲರಿಗೂ ಉಚಿತ ಲಸಿಕೆ ನೀಡುವುದರ ಜತೆಗೆ ಐದು ಲಕ್ಷ ರೂ.ವರೆಗೆ ಆರೋಗ್ಯ ಸೇವೆ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. 10 ಕೋಟಿ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗಿದ್ದು, ಭದ್ರಾ, ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಅನುದಾನ, ಮಹಾದಾಯಿ ವಿವಾದವನ್ನು ಬಗೆಹರಿಸಲಾಗಿದೆ. ರಾಜ್ಯದಲ್ಲಿನ ಬಸವರಾಜ ಬೊಮ್ಮಾಯಿ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ.4 ಮೀಸಲಾತಿ ರದ್ದುಗೊಳಿಸಿ ಒಕ್ಕಲಿಗರಿಗೆ ಹಾಗೂ ಲಿಂಗಾಯತರಿಗೆ ತಲಾ ಶೇ.2 ಮೀಸಲಾತಿ ನೀಡಲಾಗಿದೆ. ಜತೆಗೆ ಪಜಾತಿಯಲ್ಲಿನ ಎಡ-ಬಲ ಹಾಗೂ ಲಂಬಾಣಿ, ಕೊರಚ, ಕೊರಮರಿಗೆ ಮೀಸಲಾತಿಯಲ್ಲಿ ನ್ಯಾಯ ಒದಗಿಸುವ ಕೆಲಸವನ್ನು ಬೊಮ್ಮಾಯಿ ಮಾಡಿದ್ದಾರೆ ಎಂದು ಅಮಿತ್ ಷಾ ಹೇಳಿದರು.

ಕೇಂದ್ರ ಸಚಿವ ಭಗವಂತ ಕೂಬಾ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಕೆ.ಶಿವನಗೌಡ ನಾಯಕ, ಡಾ.ಶಿವರಾಜ ಪಾಟೀಲ್, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ತುಂಗಭದ್ರಾ ಕಾಡಾ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಜಿ.ಪಂ. ಸಿಇಒ ಶಶಿಧರ ಕುರೇರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net