ಅನುಷ್ಠಾನಗೊಳ್ಳದ ಸರ್ಕಾರದ ಘೋಷಣೆಗಳು: ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಬಿ.ಟಿ.ಗುರುರಾಜ್ ಟೀಕೆ

23_01_Mdy_03(Card)
Published on

ಮಂಡ್ಯ: ರಾಜ್ಯ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡಿದೆಯೇ ಹೊರತು ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಬಿ.ಟಿ.ಗುರುರಾಜ್ ಟೀಕಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಮಿಕ ವಿಭಾಗದಿಂದ ಆಯೋಜಿಸಿದ್ದ ಈ ಶ್ರಮ ಕಾರ್ಡ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಕಾರ್ಮಿಕರ ಮಕ್ಕಳಿಗೆ ಸಿಗಬೇಕಾದ ಲ್ಯಾಪ್‌ಟಾಪ್, ವಿದ್ಯಾಸಿರಿ ಸೇರಿದಂತೆ ಹಲವಾರು ಯೋಜನೆಗಳು ದೊರೆಯುತ್ತಿಲ್ಲ. ಸರ್ಕಾರ ಇನ್ನೂ ಅದನ್ನು ವಿತರಣೆ ಮಾಡುವ ಕೆಲಸ ಮಾಡುತ್ತಿಲ್ಲ. ಈ ಸರ್ಕಾರದಲ್ಲಿ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ದೂರಿದರು.

ಮುಖಂಡ ಕೆ.ಕೆ.ರಾಧಾಕೃಷ್ಣ ಕೀಲಾರ ಮಾತನಾಡಿ, ಕಾರ್ಮಿಕರು ಮತ್ತು ಅವರ ಮಕ್ಕಳು ತುಂಬಾ ಕಷ್ಟದಲ್ಲಿದ್ದಾರೆ. ಬಡವರು, ತುಂಬಾ ನೋವಿನಲ್ಲಿರುವವರಿಗೆ ಸಹಾಯ ನೀಡುವುದು ಕಾಂಗ್ರೆಸ್ ಪಕ್ಷದ ಉದ್ದೇಶ. ಕಾರ್ಮಿಕರು ಇಂತಹ ಕಾರ್ಡುಗಳನ್ನು ಮಾಡಿಸಲು ಕನಿಷ್ಟ 400 ರೂನಿಂದ 500 ರೂವರೆಗೆ ವೆಚ್ಚ ತಗುಲುತ್ತದೆ. ಅದನ್ನು ನಾವು ಬಡ ಕಾರ್ಮಿಕರನ್ನು ಗುರುತಿಸಿ ಲಕ್ಷಾಂತರ ಕಾರ್ಡುಗಳನ್ನು ಮಾಡಿಸಿಕೊಟ್ಟಿದ್ದೇವೆ. ಇಂತಹ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಸುನಿಲ್ ನಾರಾಯಣ್, ನಗರಾಧ್ಯಕ್ಷೆ ರೇವತಿ, ಜಿಲ್ಲಾ ಉಪಾಧ್ಯಕ್ಷ ಮಂಜು, ಎಚ್.ವಿ.ರಾಮಶೆಟ್ಟಿ, ಏಳುಮಲೈ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net