ದೇಶದ ಬಗ್ಗೆ ಯೋಚಿಸದ ಕಾಂಗ್ರೆಸ್: ಪ್ರಹ್ಲಾದ ಜೋಶಿ

Prahlad Joshi
Published on


ಮೈಸೂರು:
ಕಾಂಗ್ರೆಸ್ ಎಂದಿಗೂ ದೇಶಕ್ಕಾಗಿ ಚಿಂತಿಸಿಲ್ಲ. ನಕಲಿ ಗಾಂಧಿ ಕುಟುಂಬದವರು ಅವರ ಕುಟುಂಬದ ಬಗ್ಗೆ ಯೋಚನೆ ಮಾಡುತ್ತಾರೆಯೇ ಹೊರತು ದೇಶದ ಬಗ್ಗೆ ಯೋಚಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.


ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಬಗ್ಗೆ ಕಾಂಗ್ರೆಸ್‌ಗೆ ಏನು ಗೊತ್ತು? ಕಾಂಗ್ರೆಸ್‌ನವರು ಇಷ್ಟು ದಿನ ಜನರನ್ನು ಭ್ರಮೆಯಲ್ಲಿಟ್ಟಿದ್ದರು. ಈಗ ಅವರೂ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ, ಮುಂದಿನ ಚುನಾವಣೆಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.


ಕಾಂಗ್ರೆಸ್‌ನವರು ಭ್ರಮೆಯಲ್ಲಿದ್ದಾರೆ. ಅದಕ್ಕೆ ನಾವು ಏಕೆ ಬೇಡ ಅನ್ನೋಣ? ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿ ಇರುವ ವಿಷಯವನ್ನು ಮಾಧ್ಯಮದವರು ಬರಿಯಬೇಕು ಎಂದರು.
ಜೈಲಿನ ಬಗ್ಗೆ ರಾಹುಲ್ ಗಾಂಧಿ ಡಿಕೆಶಿಯಿಂದ ಮಾಹಿತಿ ಪಡೆದ ವಿಚಾರವಾಗಿ ಮಾತನಾಡಿದ ಅವರು, ಯಾರಿಗೆ ತಪ್ಪು ಮಾಡಿರುತ್ತಾರೋ ಅವರಿಗೆ ಭಯವಿರುತ್ತದೆ. ಅಂತಹವರು ಜೈಲಿನ ಬಗ್ಗೆ ವಿಚಾರಿಸುತ್ತಾರೆ. ನಾನಾಗಲಿ ಪ್ರತಾಪ್ ಸಿಂಹ ಅವರಾಗಲಿ ಈ ಬಗ್ಗೆ ವಿಚಾರಿಸುವುದಿಲ್ಲ ಎಂದರು.


ರಾಷ್ಟ್ರಪತಿ ದಸರಾ ಮಹೋತ್ಸವಕ್ಕೆ ಬರುತ್ತಿರುವುದು ಇದೇ ಮೊದಲು. ಸಾರ್ವಜನಿಕರು ಬಹುದೊಡ್ಡ ಸಂಖ್ಯೆಯಲ್ಲಿ ಭಾಗಿಯಾಗಿ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು. ರಾಷ್ಟ್ರಪತಿ ಅವರಿಗೆ ದೈವಭಕ್ತಿ ಇದೆ. ಅವರ ಕಾರ್ಯಕ್ರಮ ಪೂರ್ವ ತಯಾರಿ ಬಗ್ಗೆ ಮಾತನಾಡಲು ನಾನು ಬಂದಿದ್ದೇನೆ. ರಾಷ್ಟ್ರಪತಿಗೆ ಹುಬ್ಬಳ್ಳಿಯಲ್ಲಿ ಸನ್ಮಾನ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net