ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ

HUN-APR-23-5(DALITA JAGRUTHI SAMAVESHA
ಹುಣಸೂರು ನಗರದಲ್ಲಿ ಆಯೋಜಿಸಿದ್ದ ದಲಿತ ಜಾಗೃತಿ ಸಮಾವೇಶವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು. ಎಚ್.ವಿಶ್ವನಾಥ್, ನಿಂಗರಾಜ ಮಲ್ಲಾಡಿ, ಶಿವಶೇಖರ್, ಶಿವಕುಮಾರ್, ಗಣೇಶ್, ದೇವರಾಜ ಒಡೆಯರ್ ಇದ್ದರು.
Published on

ಹುಣಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಷಡ್ಯಂತ್ರದ ಮೂಲಕ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್‌ಗೆ ಅಂಬೇಡ್ಕರ್ ಹೆಸರನ್ನು ಹೇಳುವ ನೈತಿಕತೆ ಇಲ್ಲ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಛೇಡಿಸಿದರು.


ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ದಲಿತ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದ ಸಂವಿಧಾನವನ್ನು ಯಾರೇ ಬಂದರೂ ಬದಲಿಸಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಸಂವಿಧಾನ, ಮೀಸಲಾತಿ ಕುರಿತು ಮಾತನಾಡುವ ಕಾಂಗ್ರೆಸಿಗರು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಷಡ್ಯಂತ್ರ ರೂಪಿಸಿ ಸೋಲಿಸಿದರಲ್ಲ ಅದು ಸರಿಯೇ? ಎಂದು ಪ್ರಶ್ನಿಸಿದರು.
ಸಂವಿಧಾನ ಬದಲಾವಣೆಯಾಗಬೇಕೆಂಬ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ ಎನ್ನುವುದನ್ನು ದಲಿತರು ಯೋಚಿಸಬೇಕು. ಪದೇಪದೆ ಸುಳ್ಳನ್ನು ಹೇಳುತ್ತಲೇ ಮುಗ್ದ ದಲಿತರ ಮತಗಳನ್ನು ಗಳಿಸುವ ಕಾಂಗ್ರೆಸ್‌ನ ಹುನ್ನಾರ ಈ ಬಾರಿ ವಿಫಲವಾಗಲಿದೆ ಎಂದರು.


ಸಂವಿಧಾನ ಬದಲಾವಣೆ, ಮೀಸಲಾತಿ ರದ್ದು ಇಂತಹ ಯಾವುದೇ ಅಪಪ್ರಚಾರಕ್ಕೂ ದಲಿತರು ಕಿವಿಗೊಡಬಾರದು. ಇದನ್ನು ತಿಳಿಸುವುದಕ್ಕಾಗಿಯೇ ಈ ಸಭೆ ಆಯೋಜಿಸಿದ್ದೇವೆ. ಕಾಂಗ್ರೆಸ್ ಪಕ್ಷದವರು ಇಂತಹ ಅಪಪ್ರಚಾರವನ್ನು ನಿಲ್ಲಿಸುವುದು ಸೂಕ್ತ. ದಲಿತ ಸಮಾಜ ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಗೆ ಮತ ಚಲಾಯಿಸಬೇಕು. ಆ ಮೂಲಕ ಕೇಂದ್ರ ಪುರಸ್ಕೃತ ಯೋಜನೆಗಳ ಹೆಚ್ಚಿನ ಫಲ ಹುಣಸೂರು ಕ್ಷೇತ್ರಕ್ಕಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಬಿಜೆಪಿಗೆ ಮತ ನೀಡೋಣ ಎಂದು ಕರೆ ನೀಡಿದರು.


ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಸ್ವಾತಂತ್ರೃಕ್ಕೂ ಮುನ್ನವೇ ದಲಿತರಿಗೆ ಅಕ್ಷರ, ಆರೋಗ್ಯ ಮತ್ತು ಮೀಸಲಾತಿ ಕಲ್ಪಿಸಿದ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಅವರನ್ನು ನಾವು ಮರೆಯಲು ಸಾಧ್ಯವಿಲ್ಲ. ಹಾಗಾಗಿ ಯದುವೀರ್ ಅವರಿಗೆ ನಿಮ್ಮೆಲ್ಲರ ಮತ ಮೀಸಲಿರಲಿ ಎಂದರು.

ಸೈಟ್ ಕೊಟ್ಟಿರಾ.. ಮನೆ ಕೊಟ್ಟಿರಾ?: ಶಾಸಕ ಜಿ.ಡಿ.ಹರೀಶ್‌ಗೌಡ ತಮ್ಮ ಭಾಷಣದುದ್ದಕ್ಕೂ ಮಾಜಿ ಶಾಸಕ ಮಂಜುನಾಥ್ ಅವರ ಹೆಸರು ಪ್ರಸ್ತಾಪಿಸದೇ ಅವರ ಆಡಳಿತ ವೈಖರಿ ವಿರುದ್ಧ ವಾಗ್ದಾಳಿ ನಡೆಸಿದರು. 15 ವರ್ಷಗಳ ಆಡಳಿತಾವಧಿಯಲ್ಲಿ ಎಷ್ಟು ಬಡಜನರಿಗೆ ಸೈಟ್ ಕೊಟ್ಟಿದ್ದೀರಿ? ಮನೆ ಕೊಟ್ಟಿದ್ದೀರಿ? ದ್ವೇಷ, ಅಸೂಯೆ, ಪೋಲೀಸ್ ಸ್ಟೇಷನ್‌ನಲ್ಲಿ ಕೇಸ್ ದಾಖಲಿಸುವುದೇ ಆಯಿತಲ್ಲ. 10 ವರ್ಷಗಳ ಹಿಂದೆ ಧರ್ಮಾಪುರದ ದಲಿತ ಮುಖಂಡರನ್ನು ಎತ್ತಿಕಟ್ಟಿ ನನ್ನ ಮೇಲೂ ಅಟ್ರಾಸಿಟಿ ಕೇಸ್ ಹಾಕಿಸಿದ್ದೀರಿ. ಇದೇ ಅಲ್ವಾ ನಿಮ್ಮ ಸಂವಿಧಾನಪರ ಆಡಳಿತ? ಜನರನ್ನು ಪೊಲೀಸ್ ಠಾಣೆಗೆ ಅಲೆಸಿ ಅವರ ಮನೆ ನಾಶಮಾಡುವುದೇ ರಾಜಕೀಯನಾ? ಇದು ಅಂಬೇಡ್ಕರ್ ಹೇಳಿದ ಸಂವಿಧಾನನಾ? ಎಂದು ಪ್ರಶ್ನಿಸಿದರು.

ಸಭೆಯಲ್ಲಿ ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖಂಡರಾದ ಶಿವಶೇಖರ್, ರಾಜು, ದೇವರಾಜ ಒಡೆಯರ್, ಶಿವಕುಮಾರ್ ಮಾತನಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ಮುಖಂಡರಾದ ಹರವೆ ಶ್ರೀಧರ್, ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ, ದಲಿತ ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ರತ್ನಪುರಿ ಪ್ರಭಾಕರ್, ರಾಯನಹಳ್ಳಿ ಸ್ವಾಮಿ, ಕಟ್ಟೆಮಳಲವಾಡಿ ದೇವರಾಜ್ ಗಣೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net