ಕಾಂಗ್ರೆಸ್‌ಗೆ ನೀತಿ ನೇತೃತ್ವ ನಿಯತ್ತಿಲ್ಲ ! ಆರ್.ಎಸ್. ಪಾಟೀಲ ಕುಚಬಾಳ ವಾಗ್ದಾಳಿ

R S PATIL PRESS MEET IN BJP OFFICE
ವಿಜಯಪುರ ನಗರದ ಚುನಾವಣೆ ಪ್ರಚಾರದ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಸುದ್ದಿಗೋಷ್ಠಿ ನಡೆಸಿದರು. ಸಂಜಯ ಪಾಟೀಲ ಕನಮಡಿ, ಕೃಷ್ಣಾ ಗುನ್ಹಾಳಕರ, ಸಾಬು ಮಾಶ್ಯಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ಕಾಂಗ್ರೆಸ್‌ನ ಸುದೀರ್ಘ 65 ವರ್ಷಗಳ ಆಡಳಿತಾವಧಿಯಲ್ಲಿ ದೇಶದಲ್ಲಿ ಭಯೋತ್ಪಾದನೆ, ಆತಂಕವಾದ, ಭ್ರಷ್ಟಾಚಾರವೇ ಕಂಡು ಬಂದ ಪರಿಣಾಮ ಜನ ಬಿಜೆಪಿಗೆ ಅಧಿಕಾರಿ ನೀಡಿದ್ದಾರೆ. ಪರಿಣಾಮ ಕೇವಲ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಅಗಾಧ ಬದಲಾವಣೆಯಾಗಿದ್ದು ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಹೇಳಿದರು.

ಕೇವಲ ಒಂದೇ ಒಂದು ಕುಟುಂಬದ ಹಿತ ಕಾಯುವ ಉದ್ದೇಶ ಕಾಂಗ್ರೆಸ್‌ನದ್ದಾದರೆ ದೇಶದ ಪ್ರತಿಯೊಂದು ಕುಟುಂಬಗಳ ಹಿತ ಕಾಯುವುದು ಪ್ರಧಾನಿ ನರೇಂದ್ರ ಮೋದಿ ಅವರ ಧ್ಯೇಯ. ಯಾವುದೇ ಜಾತಿ, ಮತ, ಪಂಥಗಳೆಂದು ಭೇದ ಮಾಡದೆ ಸಬಕ್ ಸಾಥ್ ಸಬ್‌ಕಾ ವಿಕಾಸ್ ತತ್ವದಡಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಅಂಥ ಪ್ರಧಾನಿ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಮಾನಸಿಕವಾಗಿ ದಿವಾಳಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ಗೆ ದೇಶ ದಿವಾಳಿಯಾದರೂ ಚಿಂತೆಯಿಲ್ಲ; ತಾವು ಮಾತ್ರ ಅಧಿಕಾರದಲ್ಲಿರಬೇಕು. ಈವರೆಗೂ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ಅವರಿಗೆ ಸ್ಪಷ್ಟತೆ ಇಲ್ಲ. ದೇಶದಲ್ಲಿ ಯಾವ ಹೊಸತನ ತರಬೇಕು ಎಂಬ ದೂರದೃಷ್ಠಿ ಇಲ್ಲ. ಅವೈಜ್ಞಾನಿಕ ಯೋಜನೆಗಳ ಮೂಲಕ ರಾಜ್ಯದಲ್ಲಿ ದಿವಾಳಿ ಎಬ್ಬಿಸಿದ್ದಾರೆ. ಕಾಂಗ್ರೆಸ್‌ಗೆ ತನ್ನದೇ ಆದ ನೀತಿ ಇಲ್ಲ, ನೇತೃತ್ವವೂ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಯತ್ತಿಲ್ಲ ಎಂದರು.

ಮೋದಿ ಆಡಳಿತದಲ್ಲಿ ದೇಶ ಭದ್ರವಾಗಿದೆ. ಮೋದಿ ಕೇವಲ ಆಶ್ವಾಸನೆ ಕೊಡಲಿಲ್ಲ; ಅಂದುಕೊಂಡಿದ್ದನ್ನು ಮಾಡಿ ತೋರಿಸಿದರು. ಹೀಗಾಗಿ ಇಡೀ ಪ್ರಪಂಚವೇ ಮೋದಿ ಅವರ ನಡೆಯನ್ನು ಗಮನಿಸುತ್ತಿದೆ. ಮುಸ್ಲಿಂ ರಾಷ್ಟ್ರಗಳು ಕೂಡ ದೇವಸ್ಥಾನ ಕಟ್ಟಿ ಪೂಜಿಸುವ ಮಟ್ಟಿಗೆ ಭಾರತದ ಸಂಸ್ಕೃತಿ ಖ್ಯಾತಿ ಪಡೆದಿದೆ. ಭಾರತ ಜಗತ್ತಿನ ಶಾಂತಿ ಬಯಸುವ ರಾಷ್ಟ್ರ. ಜಗತ್ತನ್ನೇ ಒಂದು ಕುಟುಂಬ ಎಂದು ಭಾವಿಸುವ ದೇಶ ನಮ್ಮದು ಎಂದರು.

ಮುಖಂಡ ಸಂಜಯ ಪಾಟೀಲ ಕನಮಡಿ ಮಾತನಾಡಿ, ಎಡಪಂಥೀಯರು ರಚಿಸಿದ ಪ್ರಣಾಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ ಸೆಳೆಯಲು ಹೊರಟಿದೆ. ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್‌ನ ಅಂಶ ಎಂದು ಪ್ರಧಾನಿ ನರೇಂದ್ರ ಮೋದಿ ಸಹ ಹೇಳಿದ್ದಾರೆ. ಕಾಂಗ್ರೆಸ್ ಬಗ್ಗೆ ಜನರಿಗೆ ಬೇಸರ ತರಿಸಿದೆ. ಸ್ವಾತಂತ್ರ್ಯ ಸಿಕ್ಕಾಗ ಸಾಕ್ಷರತೆ ಪ್ರಮಾಣ ಕೇವಲ ಶೇ.13 ರಷ್ಟಿತ್ತು. ಯಾವಾಗ ಶೇ.50 ರಷ್ಟು ಸಾಕ್ಷರತೆ ದಾಟಿತೋ ಆಗ ಬಿಜೆಪಿ ಅಧಿಕಾರಕ್ಕೆ ಬಂತು. ಅಂದರೆ ಕಾಂಗ್ರೆಸ್ ಜನರನ್ನು ಅಂಧಕಾರದಲ್ಲಿಟ್ಟು ಆಡಳಿತ ನೀಡಿದ್ದರು ಎಂದು ಟೀಕಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಹಣದುಬ್ಬರ ಅತ್ಯಂತ ಕಡಿಮೆಯಾಗಿದೆ. ಪ್ರಪಂಚದ ಆರ್ಥಿಕತೆ ಶೋಚನೀಯ ಸ್ಥಿತಿಯಲ್ಲಿದ್ದಾಗಲೇ ಭಾರತದ ಆರ್ಥಿಕತೆ ಸುಭದ್ರವಾಗಿತ್ತು. ಹೀಗಾಗಿ ಭಾರತ ವಿಶ್ವ ಗುರು ಆಗಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದರು.
ಮುಖಂಡರಾದ ಕೃಷ್ಣಾ ಗುನ್ಹಾಳಕರ, ಸಾಬು ಮಾಶ್ಯಾಳ, ಚಂದ್ರಶೇಖರ ಕವಟಗಿ, ವಿಜಯಕುಮಾರ ಜೋಷಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net