

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಾಂಗ್ರೆಸ್ಗೆ ಭಾರತ, ಭಾರತೀಯತೆ, ದೇಶದ ಅಖಂಡತೆ ಹಾಗೂ ಹಿಂದುತ್ವ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ದೇಶವನ್ನು ತುಂಡರಿಸಿದವರು ಈಗ ಮತ್ತೆ ದೇಶ ತುಂಡರಿಸುವ ಮಾತನಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಮಾನಸಿಕತೆಯೇ ಭಾರತ, ಭಾರತೀಯತೆ, ಹಿಂದುತ್ವದ ವಿರುದ್ಧವಾಗಿಯೇ ಇದೆ. ತುಷ್ಠೀಕರಣದ ರಾಜಕಾರಣದ ಮದದಿಂದ ಅವರು ಏನೇನೂ ಮಾತನಾಡುತ್ತಾರೆ. ಕಾಂಗ್ರೆಸ್ನ ನೀತಿಗಳೇ ವಿಚಿತ್ರವಾಗಿದೆ. ಅವರ ಇಂಥ ನೀತಿಗಳಿಂದಲೇ ದೇಶದ ಪರಿಸ್ಥಿತಿ ಹೇಗಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಇಂದು ಪ್ರದಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಆರ್ಥಿಕವಾಗಿ ವಿಶ್ವದ 5ನೇ ಬಲಿಷ್ಠ ರಾಷ್ಟ್ರವಾಗಿದೆ ಎಂದು ಹೇಳಿದರು.
ದಕ್ಷಿಣ ಭಾರತ ರಾಷ್ಟ್ರ ಸ್ಥಾಪನೆ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ಸಂಸತ್ತಿನ ನೈತಿಕ (ಎಥಿಕ್ಸ್) ಸಮಿತಿ ಮುಂದೆ ಮನವಿ ಮಾಡಲು ಅವಕಾಶ ನೀಡುವಂತೆ ಲೋಕಸಭೆ ಸ್ಪೀಕರ್ ಅವರನ್ನು ಕೋರಲು ನಾವು ನಿರ್ಧರಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ನಾವು ಅಭದ್ರಗೊಳಿಸುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಉಲ್ಟಾ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿಗಳ ನಡುವೆ ಜಗಳ ನಡೆಯುತ್ತಿದೆ. ಹೀಗಾಗಿ ಬೇರೆಯವರು ಸರ್ಕಾರವನ್ನು ಅಭದ್ರಗೊಳಿಸುವ ಪ್ರಶ್ನೆಯೇ ಬರುವುದಿಲ್ಲ. ಅವರೇ ಬಡಿದಾಡಿಕೊಂಡು ಬಿಜೆಪಿಯವರ ಮೇಲೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.