ಇಡಿ, ಐಟಿ, ಬಿಜೆಪಿ ಯಾವುದಕ್ಕೂ ಕಾಂಗ್ರೆಸ್​ ಜಗ್ಗಲ್ಲ; ಡಿ.ಕೆ.ಶಿವಕುಮಾರ ಗುಡುಗು

h22-Congress 5
Published on

ಹುಬ್ಬಳ್ಳಿ: ಪ್ರಧಾನ ಮಂತ್ರಿ ಸ್ಥಾನವನ್ನು ಸೋನಿಯಾ ಗಾಂಧಿ ತ್ಯಾಗ ಮಾಡಿದರು. ಅವರ ಅತ್ತೆ ಇಂದಿರಾ ಗಾಂಧಿ, ಅವರ ಪತಿ ರಾಜೀವ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅಂತಹ ಧೀಮಂತ ನಾಯಕಿ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವುದು ಎಷ್ಟು ಸರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಬಿಜೆಪಿಯನ್ನು ಪ್ರಶ್ನಿಸಿದರು. ಇಂತಹ ಎಷ್ಟೇ ಐಟಿ ಬರಲಿ, ಇಡಿ ಬರಲಿ ಯಾವುದಕ್ಕೂ ಕಾಂಗ್ರೆಸ್​ ಜಗ್ಗಲ್ಲ. ಈ ದೇಶಕ್ಕೆ ಸಂವಿಧಾನ, ರಾಷ್ಟ್ರಗೀತೆ, ಜನರಿಗೆ ಹಕ್ಕು, ಶಕ್ತಿ ಕೊಟ್ಟ ಪಕ್ಷ ನಮ್ಮದು. ನಾವು ಬ್ರೀಟಿಷರ ಗುಂಡಿಗೆ ಹೆದರಿಲ್ಲ. ಇನ್ನು ನಿಮಗೆ ಹೆದರುತ್ತೇವೆಯೇ ಎಂದು ಗುಡುಗಿದರು.
ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್​ ಪ್ರತಿಭಟನೆ ನೇತೃತ್ವ ವಹಿಸಿಕೊಂಡು ಅವರು ಮಾತನಾಡಿದರು.
ಬಿಜೆಪಿ ಪಕ್ಷದಲ್ಲಿ 40 ಪರ್ಸೆಂಟ್​ ಕಮಿಷನ್​ ಆರೋಪವಿದೆ. ಪಿಎಸ್​ಐ, ಎನ್​ಡಿಎ ಹಗರಣ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಗರಣ, ಕೆಂಪಯ್ಯ ಹಗರಣ ತಾಂಡವವಾಡುತ್ತಿದೆ. ಇದನ್ನು ಮೊದಲು ತನಿಖೆ ಮಾಡಲಿ. ಅದನ್ನು ಬಿಟ್ಟು ಸೇಡಿನ ರಾಜಕೀಯ ಮಾಡುವುದು ಸರಿಯಲ್ಲ. ಹುಬ್ಬಳ್ಳಿ- ಧಾರವಾಡ ಸಿಎಂ ತವರು ಜಿಲ್ಲೆ. ಜಗದೀಶ ಶೆಟ್ಟರ್​, ಪ್ರಲ್ಹಾದ ಜೋಶಿ ಅವರ ಜಿಲ್ಲೆ. ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂಥ ಸರ್ಕಾರ ಕಿತ್ತೆಸೆಯಲು ಜನ ಬೀದಿಗೆ ಇಳಿದಿದ್ದಾರೆ ಎಂದರು.

ಬಹಿರಂಗ ಚರ್ಚೆಗೆ ಸಿದ್ಧ
ಸಚಿವ ಸುಧಾಕರ ಭ್ರಷ್ಟಾಚಾರ ಕುರಿತು ವೇದಿಕೆ ಸಿದ್ಧ ಮಾಡಿ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಸಚಿವ ಸುಧಾಕರ ಅಥವಾ ಮತ್ತೊಬ್ಬ ನನಗೆ ಏನೂ ಅಲ್ಲ. ನನ್ನ ಜತೆಗೆ ಚರ್ಚೆಗೆ ಸರಿಸಮಾನರು ಬೇಕು. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ್​, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಹಿರಂಗ ಚರ್ಚೆಗೆ ಬಂದರೆ ನಾನು ಸಿದ. ಬಹಿರಂಗ ವೇದಿಕೆಯನ್ನು ಯಾರೇ ಸಜ್ಜು ಮಾಡಿದರೂ ನಾನು ಚರ್ಚೆಗೆ ಸಿದ್ದ ಎಂದು ಡಿಕೆಶಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net