

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 8ರಂದು ನಗರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ ಹೇಳಿದರು.
ಗಿರಿಜಾ ಚಿತ್ರಮಂದಿರದ ಪಕ್ಕ ಎಂಡಿಸಿಸಿ ಬ್ಯಾಂಕ್ ನೂತನ ಆಡಳಿತ ಕಚೇರಿಯ ಶಂಕುಸ್ಥಾಪನೆ ನೆರವೇರಿಸಿ, ಮೈಷುಗರ್ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಲಿದ್ದಾರೆ. ನಂತರ ಕನಕ ಭವನದಲ್ಲಿ ಬಾಲಕರ ವಿದ್ಯಾರ್ಥಿ ನಿಲಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ಅಧ್ಯಕ್ಷತೆಯಲ್ಲಿ ಹಾಸ್ಟೆಲ್ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದ ಸಾನಿಧ್ಯವನ್ನು ಕಾಗಿನೆಲೆ ಮಹಾಸಂಸ್ಥಾನದ ಶಿವನಂದಾಪುರಿ ಸ್ವಾಮೀಜಿ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಕುರುಬರ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಸುರೇಶ್, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ರಾಜು, ನಗರಸಭೆ ಮಾಜಿ ಸದಸ್ಯ ಮಹೇಶ್, ಮಂಜುನಾಥ್, ವಿಜಯ್‌ಕುಮಾರ್, ಕೆಂಚಪ್ಪ ಇದ್ದರು.