ಜಲಪಾತೋತ್ಸವಕ್ಕೆ ಅಡ್ಡಿ ಎಚ್ಚರಿಕೆಗೆ ಖಂಡನೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಆಕ್ರೋಶ

C.D.Gangadhar
Published on

ಮಂಡ್ಯ: ಗಗನಚುಕ್ಕಿ ಜಲಪಾತೋತ್ಸವ ಸಂಸ್ಕೃತಿಯ ಪ್ರತೀಕ. ಆದರೆ ಇಂತಹ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತೇವೆಂದು ಜೆಡಿಎಸ್ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿಕೆ ನೀಡಿರುವುದು ಖಂಡನೀಯ. ಇಂತಹ ನಡವಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಹಲವು ವರ್ಷದಿಂದ ಬರದ ಹಿನ್ನೆಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ಆಚರಿಸಲು ಸಾಧ್ಯವಾಗಿರಲಿಲ್ಲ. ವರುಣನ ಕೃಪೆಯಿಂದ ಕೆಆರ್‌ಎಸ್ ಜಲಾಶಯ ತುಂಬಿದ್ದು, ಹಾಗಾಗಿ ಗಗನಚುಕ್ಕಿ ಜಲಪಾತೋತ್ಸವ ಮಾಡಲಾಗುತ್ತಿದೆ. ಇದಕ್ಕೆ ಅಡ್ಡಿಪಡಿಸುವ ಹೇಳಿಕೆ ನೀಡಿ ಅಗ್ಗದ ಪ್ರಚಾರ ತೆಗೆದುಕೊಳ್ಳುವುದನ್ನು ಬಿಟ್ಟು ಮಳವಳ್ಳಿ ಜನರ ಭಾವನೆಗೆ ಬೆಲೆಕೊಟ್ಟು ಕಾರ್ಯಕ್ರಮಕ್ಕೆ ನಿಮ್ಮ ಸಹಕಾರ ಮತ್ತು ಸಲಹೆ ನೀಡಿ ಯಶಸ್ವಿಗೊಳಿಸಿ ಎಂದು ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಜಲಪಾತೋತ್ಸವಕ್ಕೆ ಸಿದ್ಧತೆ ನಡೆಸುತ್ತಿರುವ ವೇಳೆ ಅಡ್ಡಿಪಡಿಸುವುದು ಹಾಗೂ ಮುಖ್ಯಮಂತ್ರಿ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಹೇಳಿಕೆ ನಿಮಗೆ ಶೋಭೆ ತರುವುದಿಲ್ಲ. ರಾಜ್ಯದ ಮೂಲೆ ಮೂಲೆಯಿಂದ ಜನರು ಗಗನಚುಕ್ಕಿ ಜಲಪಾತೋತ್ಸವ ಕಣ್ತುಂಬಿಕೊಳ್ಳಲು ಬರುತ್ತಾರೆ. ಜಲಪಾತೋತ್ಸವಕ್ಕೆ ಅಡ್ಡಿಪಡಿಸುವುದರಿಂದ ತಮ್ಮ ಜನಪ್ರಿಯತೆ ಹೆಚ್ಚಾಗುವುದಿಲ್ಲ. ಮಳವಳ್ಳಿ ಕಡೇ ಭಾಗಕ್ಕೆ ನೀರು ಹರಿಸಿಲ್ಲ, ಕೆರೆ-ಕಟ್ಟೆಗಳನ್ನು ತುಂಬಿಸಿಲ್ಲ ಎಂದು ಹೇಳುತ್ತಿರುವ ನೀವು ಇಷ್ಟು ದಿನ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ತಮ್ಮ ವೈಯಕ್ತಿಕ ಹಿತಾಸಕ್ತಿಗೋಸ್ಕರ ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿರುವ ಜಲಪಾತೋತ್ಸವಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಈಗಾಗಲೇ ಕಳೆದೊಂದು ತಿಂಗಳಿಂದ ನಿರಂತರವಾಗಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಕೆರೆ-ಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ವಿಶ್ವೇಶ್ವಯ್ಯ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ನಾಲಾ ಆಧುನೀಕರಣ ನಡೆಯುತ್ತಿದೆ. ಸಂಪೂರ್ಣ ಕಾಮಗಾರಿಗೆ ಡಿಸೆಂಬರ್‌ವರೆಗೆ ಕಾಲಾವಕಾಶ ಬೇಕು. ರೈತರಿಗೆ ತೊಂದರೆಯಾಗಬಾರದೆಂದು ನಾಲೆಗಳಿಗೆ ನೀರು ಹರಿಸಲಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ಖಾಸಗಿ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯ ಕಬ್ಬನ್ನು ಮಾತ್ರ ಅರೆಯಬೇಕು. ಅದು ಬಿಟ್ಟು ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಕಟಾವು ಮಾಡಲು ಬರುತ್ತಿರುವುದು ಸರಿಯಲ್ಲ. ಇದು ನಿಲ್ಲದಿದ್ದರೆ ನಿಮ್ಮ ಭಾಗಕ್ಕೆ ನಾವು ಬರಬೇಕಾಗುತ್ತದೆ. ನಮ್ಮ ಮೈಷುಗರ್ ಕಾರ್ಖಾನೆಯ 2.5 ಲಕ್ಷ ಟನ್ ಕಬ್ಬು ಗುರಿಯನ್ನು ಸದ್ಯದಲ್ಲೇ ಮುಟ್ಟುತ್ತೇವೆ. ಈಗಾಗಲೇ 61 ಸಾವಿರ ಟನ್ ಕಬ್ಬು ಅರೆಯಲಾಗಿದೆ. ಕಬ್ಬು ಕಟಾವಿನಲ್ಲಿ ಯಾವುದೇ ರಾಜಿಯಿಲ್ಲ. ನಾವು ಕಬ್ಬು ಕಡಿಯುವಂತೆ ನಮ್ಮ ಕಾರ್ಯಕರ್ತರು ಹೇಳಿದ ರೀತಿ ರೈತರಿಗೆ ತಾರತಮ್ಯ ಮಾಡಿಲ್ಲ. ಕಾಂಗ್ರೆಸ್ ಪರವಾಗಿರುವ ವ್ಯಕ್ತಿಗಳಿಗೆ ಕಬ್ಬು ಕಡಿಯುವಂತೆ ಎಲ್ಲಿಯೂ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಡಾ ಅಧ್ಯಕ್ಷ ನಯೀಂ, ನಗರಸಭೆ ಸದಸ್ಯ ಶ್ರೀಧರ್, ಮುಖಂಡರಾದ ಸಿ.ಎಂ.ದ್ಯಾವಪ್ಪ, ವಿಜಯಕುಮಾರ್, ಪ್ರಶಾಂತ್‌ಬಾಬು, ಎಚ್.ಬಿ.ವಿಜಯ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net