

ಗುರುಪುರ: ಪ್ಯಾಲೆಸ್ತೇನ್ ಪರ ಹೋರಾಡುವ ಮುಂಚೆ ಇಸ್ರೇಲ್ ಮೇಲೆ ಉಗ್ರರು ನಡೆಸಿದ ನರಮೇಧ, ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಕನಿಕರ ತೋರಿಸಿ ಘಟನೆಗೆ ಖಂಡನೆ ವ್ಯಕ್ತಪಡಿಸಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.
ಕಾವೂರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಬಾಂಗ್ಲಾದೇಶದಲ್ಲಿ ಹಿಂದುಗಳ ಹತ್ಯೆ ಮಾಡಿ ಅವರ ಆಸ್ತಿ, ಮನೆಗೆ ಬೆಂಕಿ ಹಚ್ಚಿದರೂ ಎಡಪಕ್ಷಗಳಿಗೆ ಕನಿಕರ ಉಂಟಾಗಲಿಲ್ಲ. ರೈತರು ಸಹಿತ ದೇಶದ ಜನರನ್ನು ಬೀದಿಪಾಲಾಗಿಸುತ್ತಿರುವ ವಕ್ಫ್ ದೌರ್ಜನ್ಯದ ಬಗ್ಗೆ ಚಕಾರ ಎತ್ತದ ಈ ಪಕ್ಷಗಳು ಮೌನಕ್ಕೆ ಶರಣಾಗಿವೆ ಎಂದು ಟೀಕಿಸಿದರು.
ಇಸ್ರೇಲ್‌ನ ಯಹೂದಿಗಳ ಮೇಲೆ ನಡೆದ ದಾಳಿಯನ್ನು ಕಂಡು ಕಾಣದಂತೆ ಇರುವ ಮನಸ್ಥಿತಿಯ ಮಂದಿ ಇಂದು ಉಗ್ರರ ನಾಮಾವಶೇಷ ಆಗುತ್ತಿರುವಾಗ ಪ್ರತಿಭಟನೆಯ ನೆನಪಾಗುತ್ತದೆ. ಪ್ಯಾಲೆಸ್ತೇನ್ ದಾಳಿ ಮಾಡಲು ಪ್ರಚೋದನೆ ನೀಡಿದವರನ್ನು ಮೊದಲು ಖಂಡಿಸುವ ಧೈರ್ಯ ತೋರಬೇಕು. ಕೇವಲ ಹಿಂದು ವಿರೋಧಿ ಓಟ್ ಬ್ಯಾಂಕ್ ಮಾಡುವ ಕಾಂಗ್ರೆಸ್‌ನ ರಾಜಕೀಯ ಬಂಡವಾಳ ಜನರಿಗೆ ಅರಿವಾಗತೊಡಗಿದ್ದು, ದೇಶದಲ್ಲಿ ರಾಷ್ಟ್ರೀಯತೆಯ ಚಿಂತನೆಯ ಧ್ರುವೀಕರಣ ಆರಂಭಗೊಂಡಿದೆ ಎಂದು ತಿಳಿಸಿದರು.