ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆ

Rohit Chakrateertha
Published on

ಶಿರಸಿ: ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಅಸಂವಿಧಾನಿಕವಾಗಿ ಪಠ್ಯ-ಪುಸ್ತಕ ಪರಿಷ್ಕರಣೆ ಮಾಡಿ ಸರ್ಕಾರಿ ಕನ್ನಡ ಶಾಲೆಗಳನ್ನು ಸಾಯಿಸುವ ಪ್ರಯತ್ನ ಮಾಡುತ್ತಿದೆ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಾಗ್ದಾಳಿ ನಡೆಸಿದರು.

ಅವರು ಗುರುವಾರ ಮಾಧ್ಯಮದವರ ಜತೆ ಮಾತನಾಡಿ, ಪಠ್ಯ-ಪುಸ್ತಕ ಪರಿಷ್ಕರಣೆ ಮಾಡಿ ಈಗಿರುವ ಪಾಠಗಳನ್ನು ತೆಗೆದು ಯಾವ ಹೊಸತನದ ಪಾಠಗಳನ್ನು ಸೇರಿಸುತ್ತಾರೆ ಎಂಬುದನ್ನು ತಿಳಿಸಿಲ್ಲ. ಹಿಂದಿನ ಸರ್ಕಾರ ಮಾಡಿದ ಮಾಡಿದ ಪರಿಷ್ಕರಣೆ ಮಾಡಿದೆ ಎಂಬ ಅಜೆಂಡಾ ಮುಂದಿಟ್ಟುಕೊಂಡು ಪಠ್ಯಗಳನ್ನು ತೆಗೆದು ಹಾಕಲಾಗಿದೆ ಎಂದರು.

ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಿ, 16 ಪಾಠಗಳನ್ನು ಏಕಾಏಕಿ ತೆಗೆಯಲಾಗಿದ್ದು, ಇದಕ್ಕೆ ಶಿಕ್ಷಣ ಇಲಾಖೆಯಲ್ಲಿ ಆಸ್ಪದವಿಲ್ಲ. ಸಮಿತಿ ರಚಿಸಿ, ಪತ್ರದ ಮೂಲಕ ಸರ್ಕಾರಕ್ಕೆ ಯಾವ ಪಾಠ ತೆಗೆಯಲಾಗುತ್ತದೆ ಎಂಬ ಮಾಹಿತಿ ನೀಡಿ, ಅನುಮತಿ ಪಡೆದು ಪರಿಷ್ಕರಣೆ ಮಾಡಬೇಕು. ಇವೆಲ್ಲವನ್ನೂ ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪದೇ ಪದೇ ಪಠ್ಯ-ಪುಸ್ತಕ ಪರಿಷ್ಕರಣೆಯಿಂದ ಮಕ್ಕಳಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಪರಿಷ್ಕರಣೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಸಾಯಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಇದರಿಂದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪುತ್ತದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net