ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿ

23 Jaggu 2
ಬೆಳಗಾವಿ ಹಿಂದವಾಡಿಯ ಮಹಾವೀರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ನ ಕರಾಳ ಇತಿಹಾಸಕ್ಕೆ 50’ ಕಾರ್ಯಕ್ರಮವನ್ನು ಶ್ಯಾಮಾಪ್ರಸಾದ್ ಮುಖರ್ಜಿ ಭಾವಚಿತ್ರ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಸಿ.ಟಿ.ರವಿ, ಜಗದೀಶ ಶೆಟ್ಟರ್, ಅಭಯ್ ಪಾಟೀಲ, ಈರಣ್ಣ ಕಡಾಡಿ, ಮಹಾಂತೇಶ ಕವಟಗಿಮಠ, ಸಂಜಯ್ ಪಾಟೀಲ, ಅರವಿಂದ ಪಾಟೀಲ ಇತರರಿದ್ದರು.
Published on

ಬೆಳಗಾವಿ: ಕಾಂಗ್ರೆಸ್ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಪರಿಸ್ಥಿತಿ ಬದಲಾದರೂ ಕಾಂಗ್ರೆಸ್‌ನ ಮನಸ್ಥಿತಿ ಬದಲಾಗಿಲ್ಲ. ಕಾಂಗ್ರೆಸ್ಸಿನವರಿಗೆ ಬಿಜೆಪಿಗರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಬಿಜೆಪಿ ವತಿಯಿಂದ ಹಿಂದವಾಡಿಯ ಮಹಾವೀರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ನ ಕರಾಳ ಇತಿಹಾಸಕ್ಕೆ 50’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತುರ್ತು ಪರಿಸ್ಥಿತಿ ಎಂದರೆ, ಅದು 2ನೇ ಸ್ವಾತಂತ್ರ್ಯ ಸಂಗ್ರಾಮವಿದ್ದಂತೆ. ಕಾಂಗ್ರೆಸ್ ತನ್ನ ರಾಜಕೀಯ ಅಸ್ತಿತ್ವ ಮತ್ತು ಅಧಿಕಾರದ ಉಳಿವಿಗಾಗಿ ಸರ್ವಾಧಿಕಾರಿ ನಿರ್ಧಾರ ತಳೆದು ಸಂವಿಧಾನದ ಮೇಲೆ ದೌರ್ಜನ್ಯ ಎಸಗಿದರು. ಪ್ರಜಾಪ್ರಭುತ್ವ ದಮನಗೊಳಿಸುವ ಕೆಲಸ ಮಾಡಿದರು ಎಂದರು.

ನಮ್ಮ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಕಾಂಗ್ರೆಸ್ ಸರ್ಕಾರದ ವೇಳೆ ಸಂವಿಧಾನ ಕೋಮಾ ಸ್ಥಿತಿಯಲ್ಲಿತ್ತು. ಪ್ರಜಾಪ್ರಭುತ್ವ ಜೈಲಿನಲ್ಲಿತ್ತು. ಅಂತಹ ಪರಿಸ್ಥಿತಿ ಇಂದಿರಾ ಸರ್ಕಾರದಲ್ಲಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 50 ವರ್ಷದ ಹಿಂದೆ ಇಂದಿರಾ ಸರ್ಕಾರ ಸಂವಿಧಾನದ ಮೇಲೆ ಅನ್ಯಾಯ ಮಾಡುತ್ತಿದ್ದಾಗ ಸುಮ್ಮನಾಗಿದ್ದರು. ನೀವು ಇಂದಿರಾಗಾಂಧಿ ಮಾತಿಗೆ ತಲೆ ಆಡಿಸುತ್ತಿದ್ದೀರಿ. ನಾವು ಜನರ ಧ್ವನಿಯಾಗಿ ಘರ್ಜಿಸಿ ಜೈಲು ಸೇರುತ್ತಿದ್ದೇವು. ನಮ್ಮ ಬಗ್ಗೆ ಮಾತನಾಡುವ ನೈತಿಕ ಅಧಿಕಾರ ಕಾಂಗ್ರೆಸ್ಸಿಗಿಲ್ಲ ಎಂದರು.

ನಾಗರಿಕರ ಹಕ್ಕು ಸಂಹಾರ: ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ತುರ್ತು ಪರಿಸ್ಥಿತಿ ಕಾಲಕ್ಕೆ ನಾಗರಿಕ ಹಕ್ಕುಗಳನ್ನು ಸಂಹಾರ ಮಾಡಿದ್ದರು. ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದರು. ಜಾರ್ಜ್ ಫರ್ನಾಂಡೀಸ್ ಸೇರಿ ಪ್ರಮುಖ ನಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಗರೀಬಿ ಹಟಾವೋ ಎಂದವರಿಗೆ ಬಡವರ ಬಗ್ಗೆ ನಿಜವಾದ ಕಾಳಜಿ ಎಂದಿದ್ದರೆ, ತುರ್ತು ಪರಿಸ್ಥಿತಿಯನ್ನೇ ಘೋಷಿಸುತ್ತಿರಲಿಲ್ಲ. ಇಂದಿರಾಗಾಂಧಿ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಆದರೆ, ಕೊಡಲಿಲ್ಲ. ಈಗ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಯಾವುದೇ ನಿರ್ಬಂಧ ಇಲ್ಲ ಎಂದರು.

ಶಾಸಕ ಅಭಯ್ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಸಂಜಯ್ ಪಾಟೀಲ, ಅರವಿಂದ ಪಾಟೀಲ, ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಉಜ್ವಲಾ ಬಡವನಾಚೆ, ಅಕ್ಕಾತಾಯಿ ಇನಾಮದಾರ, ದಿಲೀಪ್ ವರ್ಣೇಕರ, ಅನಿಲ ದೇಶಪಾಂಡೆ, ಆರ್.ಎಸ್. ಮುತಾಲಿಕ, ರಮೇಶ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ, ಸಂದೀಪ್ ದೇಶಪಾಂಡೆ, ಧನಶ್ರೀ ದೇಸಾಯಿ, ರಾಜಶೇಖರ ಡೋಣಿ, ಈರಯ್ಯ ಖೋತ, ರಾಮಚಂದ್ರ ಜೋಶಿ, ವಿಲಾಸ ಪವಾರ ಇದ್ದರು.

ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ. ಇದು ಖಾಸಗಿ ವಿಷಯವಲ್ಲ. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿ. ಇದಕ್ಕಿಂತ ಮೊದಲು ಜಮೀರ್ ಅಹಮ್ಮದ್ ಅವರ ರಾಜೀನಾಮೆ ತೆಗೆದುಕೊಳ್ಳಿ. ಗ್ಯಾರಂಟಿ ಕೊಟ್ಟಿದ್ದೇವೆ ಅಂದರೆ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲ. ನೀವು ಇಲಾಖೆಗಳಲ್ಲಿ ರೇಟ್ ಕಾರ್ಡ್ ಹಾಕಿ. | ಸಿ.ಟಿ.ರವಿ ವಿಧಾನ ಪರಿಷತ್ ಸದಸ್ಯ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯ ಸರ್ಕಾರ ದಿವಾಳಿ ಆಗಿದೆ. ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಆಡಳಿತ ಪಕ್ಷದವರೇ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಿದ್ದಾರೆ. | ಜಗದೀಶ ಶೆಟ್ಟರ್ ಸಂಸದ ನೈತಿಕತೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಸರ್ಕಾರ ಬಿಜೆಪಿ ಸರ್ಕಾರ ನೀಡಿದ 355 ಕೋಟಿ ರೂ. ಅನುದಾನವನ್ನೇ ಮರಳಿ ಪಡೆದಿದೆ. ಬಿಜೆಪಿ ಸರ್ಕಾರ ಮಂದಿರಗಳಿಗೆ ನೀಡಿದ ಅನುದಾನವನ್ನೂ ಮಂಜೂರು ಮಾಡುತ್ತಿಲ್ಲ. | ಅಭಯ್ ಪಾಟೀಲ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net