ಬೇಳೂರು ಗ್ರಾಪಂ ಸೂಪರ್‌ಸೀಡ್‌ಗೆ ಕಾಂಗ್ರೆಸ್ ಆಗ್ರಹ

Published on

ಸೋಮವಾರಪೇಟೆ : ಬೇಳೂರು ಗ್ರಾಮ ಪಂಚಾಯಿತಿಯಲ್ಲಿ 2023-24ನೇ ಸಾಲಿನಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದ್ದು, ಕೂಡಲೆ ಉನ್ನತ ಮಟ್ಟದ ತನಿಖೆ ನಡೆಸಿ, ಪಂಚಾಯಿತಿ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ, ಅಂದಿನ ಅಧ್ಯಕ್ಷರು ಮತ್ತು ಪಿಡಿಒ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬೇಳೂರು ವಲಯ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.

ಅಂದಿನ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅವ್ಯವಹಾರದ ಬಗ್ಗೆ ದಾಖಲೆ ಸಮೇತ ದೂರು ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ನ್ಯಾಯಯುತ ತನಿಖೆ ನಡೆಸಿ, ಪಂಚಾಯಿತಿ ಆಡಳಿತವನ್ನು ಸೂಪರ್‌ಸೀಡ್ ಮಾಡಬೇಕು. ತಪ್ಪಿದಲ್ಲಿ ವಲಯ ಕಾಂಗ್ರೆಸ್ ಸಮಿತಿಯಿಂದ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್ ಹೇಳಿದರು.

2023-24ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಲೆಕ್ಕಪರಿಶೋಧಕರು ಪರಿಶೀಲಿಸಿದಾಗ ಖರ್ಚಿಗೆ ಭರಿಸಲಾದ 12,47,670 ರೂ.ಗಳಿಗೆ ವೋಚರ್ ಮತ್ತು ಬಿಲ್‌ಗಳನ್ನು ಲೆಕ್ಕಪರಿಶೋಧನೆ ವೇಳೆ ಹಾಜರುಪಡಿಸಿರುವುದಿಲ್ಲ. ಈ ಮಾಹಿತಿಯನ್ನು ಲೆಕ್ಕಪರಿಶೋಧಕರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಇವೆಲ್ಲ ವಿವರಗಳನ್ನು ಮಾಹಿತಿ ಹಕ್ಕಿನಲ್ಲಿ ಪಡೆದುಕೊಂಡು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಇನ್ನು ಅನೇಕ ದಾಖಲೆಗಳನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.

12,47,670 ರೂ. ಬಿಲ್‌ನ ನಕಲು ಪ್ರತಿಯನ್ನು ಮಾಹಿತಿ ಹಕ್ಕಿನಲ್ಲಿ ಕೇಳಿದ ಸಂದರ್ಭ ಪಂಚಾಯಿತಿಯಲ್ಲಿರುವ ಯಾವುದೋ ಖರ್ಚಿನ ಬಿಲ್‌ಗಳ ನಕಲು ಪ್ರತಿಯನ್ನು ನೀಡಿರುತ್ತಾರೆ. ಅವುಗಳನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿ ಎಂಬುದು ಗೊತ್ತಾಗಿರುತ್ತದೆ. ಬಿಲ್ ವಿಳಾಸ, ಅಂಗಡಿ ವಿಳಾಸ, ಜಿಎಸ್‌ಟಿ ಸಂಖ್ಯೆ, ಬ್ಯಾಂಕ್ ಖಾತೆ ಯಾವುದಕ್ಕೂ ತಾಳೆಯಾಗುತ್ತಿಲ್ಲ, ಇವೆಲ್ಲದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಯಾಕೂಬ್ ಹೇಳಿದರು.

2023-24ನೇ ಸಾಲಿನಲ್ಲಿ ಕೇವಲ 15 ದಿನಗಳಲ್ಲಿ 12 ಲಕ್ಷದಷ್ಟು ಹಣದ ದುರುಪಯೋಗವಾಗಿರುವುದು ಕಂಡು ಬಂದಿದೆ. ಸುದೀರ್ಘ ನಾಲ್ಕು ವರ್ಷಗಳ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಸಿರುವ ಶಂಕೆ ಇದ್ದು, ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡಬೇಕು. ಪಂಚಾಯಿತಿ ಆಡಳಿತ ಮಂಡಳಿಯ ದುರಾಡಳಿತ, ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗವುದು ಎಂದು ಬೇಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಕುಮಾರ್ ಆಗ್ರಹಿಸಿದ್ದಾರೆ.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ, ಕೆ.ಜೆ.ಸುನಿಲ್, ಪದಾಧಿಕಾರಿಗಳಾದ ಚಂದ್ರಿಕಾ ಕುಮಾರ್, ಬಿ.ಎನ್.ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net