

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕರ್ತರು ಗುರುವಾರ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಸಚಿವ ಮಧು ಬಂಗಾರಪ್ಪ ಅವರು ಈಚೆಗೆ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಸಿಗಂಧೂರು ಸೇತುವೆ ವಿಷಯವಾಗಿ ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆಂದು ನೀಡಿದ್ದ ಹೇಳಿಕೆಯನ್ನು ಬಿಜೆಪಿಯ ಸೋಶಿಯಲ್ ಮೀಡಿಯಾ ಕಾರ್ಯಕರ್ತರು ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿ 19 ಸೆಕೆಂಡ್ ವಿಡಿಯೋ ಹರಿಬಿಟ್ಟಿದ್ದಾರೆ. ಈ ಮೂಲಕ ಸಚಿವರು ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆಂದು ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸಿಗಂಧೂರು ಚೌಡೇಶ್ವರಿ ಎಲ್ಲ ಸಮಾಜದವರ ಆರಾಧ್ಯ ದೈವ, ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗಗಳ ಭಕ್ತರು ಅತಿಯಾಗಿ ಪೂಜಿಸುವ ತಾಯಿ. ಆದರೆ ಬಿಜೆಪಿಯವರ ಇಂತಹ ಕ್ಷುಲಕ ನಡವಳಿಕೆಯಿಂದ ಅಪಾರ ಭಕ್ತ ವೃಂದದವರಿಗೆ ಮನಸಿಗೆ ನೋವಾಗಿದೆ. ಈ ರೀತಿಯ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿ ಶಾಂತಿಭಂಗವಾಗುವ ಸಾಧ್ಯತೆಗಳಿವೆ. ಹಾಗಾಗಿ ಉಸ್ತುವಾರಿ ಸಚಿವರ ಹೇಳಿಕೆ ತಿರುಚಿದವರ ಮೇಲೆ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎಂ.ರಮೇಶ್ ಶಂಕರಘಟ್ಟ ನೇತೃತ್ವದಲ್ಲಿ ಮುಖಂಡರಾದ ನಾಗರಾಜ್ ಕಂಕಾರಿ, ಎಚ್.ಪಾಲಾಕ್ಷ, ಮಂಜುನಾಥ್, ಭಾಸ್ಕರ್, ಶರತ್ ಮರಿಯಪ್ಪ, ಕುರುವಳ್ಳಿ ನಾಗರಾಜ್, ನವಿಲೆ ಮಂಜುನಾಥ್, ಬಸವರಾಜ್, ಪ್ರವೀಣ್, ಲಕ್ಷ್ಮೀಕಾಂತ್, ಉಮೇಶ್, ಗಿತೇಂದ್ರ, ಶಿವು, ರಘ, ರಾಘವೇಂದ್ರ, ಮಹೇಂದ್ರ, ಮೋಹನ್, ವಿನೋದ್, ಲೋಕೇಶ್,ಅನಸೂಯಮ್ಮ, ಮಂಜುನಾಥ್ ಮನವಿ ಸಲ್ಲಿಸಿದರು.