

ಮೈಸೂರು: ನಗರದ ಒಂಟಿಕೊಪ್ಪಲು ದಾಸಪ್ಪ ವೃತ್ತದಿಂದ ವರ್ತುಲ ರಸ್ತೆಯ ರಾಯಲ್ ಇನ್ ಹೋಟೆಲ್‌ವರೆಗಿನ ರಸ್ತೆಗೆ (ಕೆಆರ್‌ಎಸ್ ಕಡೆಗೆ ಸಾಗುವ ಮಾರ್ಗ) ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ನಗರ ಪಾಲಿಕೆ ಆಯುಕ್ತ ಆಸಾದ್‌ಉರ್ ರೆಹಮಾನ್ ಷರೀಫ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ಗೌಡ ಅವರು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರಿಡುವಂತೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಪರಿಗಣಿಸಿ ಡಿ.17ರಂದು ಸಾರ್ವಜನಿಕ ಆಕ್ಷೇಪಣೆಗಳಿಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಸಿದ್ದಾಮಯ್ಯ ಮೈಸೂರು ಅಭಿವೃದ್ಧಿಗೆ 2013ರಿಂದ 2018ರಲ್ಲಿ 2800 ಕೋಟಿ ರೂ. ಅನುದಾನ ನೀಡಿ 32 ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಆ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಡುವುದು ಸೂಕ್ತ ಎಂದು ಎಂ.ಲಕ್ಷ್ಮಣ್ ಹೇಳಿದರು.
ಸದರಿ ರಸ್ತೆಯಲ್ಲಿ 12 ಆಸ್ಪತ್ರೆಗಳ ನಿರ್ಮಾಣಕ್ಕೆ ಸಿದ್ದರಾಮಯ್ಯ ಕಾರಣರಾಗಿದ್ದಾರೆ. ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಸರ್ಕಾರಿ ಪ್ರಕೃತಿ ಮತ್ತು ಯೋಗಾ ಮಹಾವಿದ್ಯಾಲಯ ಆಸ್ಪತ್ರೆ, ಸರ್ಕಾರಿ ಹೈಟೆಕ್ ಪಂಚಕರ್ಮ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಚರಕ ಆಯುರ್ವೇದ ಸ್ನಾತಕೋತ್ತರ ಕೇಂದ್ರ ಆಸ್ಪತ್ರೆಗಳಿವೆ. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಫೆರಿಫೆರಲ್ ಕ್ಯಾನ್ಸರ್ ಕೇಂದ್ರ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ನೆಫ್ರೋ ಯುರಾಲಜಿ 100 ಹಾಸಿಗೆಯ ಆಸ್ಪತ್ರೆ ಟೆಂಡರ್ ಹಂತದಲ್ಲಿ ಇದೆ. ನಿಮಾನ್ಸದ್ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಇಷ್ಟೆಲ್ಲ ಅಭಿವೃದ್ಧಿ ಕಾರ್ಯ ಮಾಡಿರುವ ಸಿದ್ದರಾಮಯ್ಯ ಅವರ ಹೆಸರನ್ನು ಸದರಿ ರಸ್ತೆಗೆ ಇಡುವುದು ಅತ್ಯಂತ ಸೂಕ್ತ ಎಂದು ತಿಳಿಸಿದರು.
ನಮಗೆ ತಿಳಿದಿರುವ ಹಾಗೆ ಈ ರಸ್ತೆಗೆ ಯಾವ ಹೆಸರೂ ನೇಮಕ ಮಾಡಿರುವುದಿಲ್ಲ. ಈ ರಸ್ತೆಯನ್ನು ವಿವಿಧ ಹೆಸರುಗಳಲ್ಲಿ ಕರೆಯುತ್ತಿರುವುದು ವಾಡಿಕೆಯಾಗಿದೆ. ಈ ಹಿಂದೆ ಕೆಲವರು ಪ್ರಿನ್ಸೆಸ್ ರಸ್ತೆ ಎಂದು ಹೆಸರಿಡಲು ಮನವಿ ಸಲ್ಲಿಸಿದ್ದರೂ ಅಂದಿನ ಬಿಜೆಪಿ ಸರ್ಕಾರ ಪ್ರಿನ್ಸೆಸ್ ರಸ್ತೆ ಎಂದು ಹೆಸರಿಡಲು ನಿರಾಕರಿಸಿತ್ತು. ಕೆಲವರು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಬರೆದಿರುವುದನ್ನೇ ದಾಖಲೆ ಎಂದು ಬಿಂಬಿಸಿ ಸಿದ್ದರಾಮಯ್ಯನವರ ಹೆಸರನ್ನು ಇಡಬಾರದೆಂದು ವಾದಿಸುತ್ತಿರುವುದು ಸರಿಯಲ್ಲ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಮೇಯರ್‌ಗಳಾದ ಬಿ.ಎಲ್. ಭೈರಪ್ಪ, ಆರೀಫ್ ಹುಸೇನ್, ಟಿ.ಬಿ. ಚಿಕ್ಕಣ್ಣ, ಮೋದಾಮಣಿ, ಪುಷ್ಪಾಲತಾ ಚಿಕ್ಕಣ್ಣ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಸೈಯದ್ ಹುಸೇನ್ ಹಾಗೂ ಇತರರು ಇದ್ದರು.