ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಸತ್ವ ಪರೀಕ್ಷೆ

images
Published on


ಪಿ.ಬಿ.ಹರೀಶ್ ರೈ

ಮಂಗಳೂರು :ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸೋಲು ಅನುಭವಿಸಿರುವ ಕರಾವಳಿಯ ಕೈ ಪಾಳಯ ಸದ್ಯ ಆತಂಕದ
ಸ್ಥಿತಿಯಲ್ಲಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೂಡಿದ ಎಲ್ಲ ಕಾರ್ಯ ತಂತ್ರ ವಿಫಲವಾಗಿ ಸೋಲಿನ ಸರಣಿ ಮುಂದುವರಿದಿದೆ. ಗ್ಯಾರಂಟಿ ಯೋಜನೆ, ಅಧಿಕಾರದ ಬಲವಿದ್ದರೂ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಗೆಲುವಿನ ಸಮೀಪ ಸುಳಿಯುವುದು ಸಾಧ್ಯವಾಗಿಲ್ಲ. ಒಂದೆರಡು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್‌ಗೆ ಸತ್ವ ಪರೀಕ್ಷೆ ಎದುರಾಗಿದೆ.
*ಹಿರಿಯ ನಾಯಕರ ಸೋಲು
ದ.ಕ. ಲೋಕಸಭಾ ಕ್ಷೇತ್ರ (ಹಿಂದಿನ ಮಂಗಳೂರು )ವನ್ನು ವಶ ಪಡಿಸಲು ಕಾಂಗ್ರೆಸ್ ಮೂರು ದಶಕದಿಂದ ಹೋರಾಟ ನಡೆಸುತ್ತಿದೆ. 1991ರ ಚುನಾವಣೆಯಲ್ಲಿ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ಮೊದಲ ಸೋಲು ಅನುಭವಿಸಿದ ಬಳಿಕ ಈ ಕ್ಷೇತ್ರ ಕಾಂಗ್ರೆಸ್‌ಗೆ ಮರೀಚಿಕೆಯಾಗಿದೆ. ಪೂಜಾರಿ ಅವರು 5 ಬಾರಿ, ವೀರಪ್ಪ ಮೊಯ್ಲಿ 2 ಬಾರಿ ಸೋತ ಬಳಿಕ ಕಾಂಗ್ರೆಸ್ ಯುವ ಮುಖಗಳ ಪ್ರಯೋಗಕ್ಕೆ ಮುಂದಾಯಿತು.
*ಜಾತಿ ಪ್ರಯೋಗ ವಿಫಲ
2019ರ ಚುನಾವಣೆಯಲ್ಲಿ ಯುವ ನಾಯಕ ಮಿಥುನ್ ರೈ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಬಿಜೆಪಿ ಅಭ್ಯರ್ಥಿ ಬಂಟ ಸಮುದಾಯವರಾದ ಅದೇ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಕೂಡಾ ಆದ್ಯತೆ ನೀಡಿತ್ತು. ಆದರೆ 2.74 ಲಕ್ಷ ದಾಖಲೆ ಮತಗಳ ಅಂತರದ ಸೋಲು ಎದುರಾಯಿತು. ಈ ಬಾರಿ ಯುವ ವಕೀಲ ಪದ್ಮರಾಜ್ ಆರ್. ಅವರನ್ನು ಕಣಕ್ಕಿಳಿಸುವ ಮೂಲಕ ಬಿಲ್ಲವ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನ ನಡೆಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತ ಗಳಿಕೆ 1 ಲಕ್ಷ ಏರಿದರೂ ಸೋಲಿನ ಸುಳಿಯಿಂದ ಪಾರಾಗಲು ಸಾಧ್ಯವಾಗಲಿಲ್ಲ.
* ಹುಸಿಯಾದ ನಿರೀಕ್ಷೆ
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಅಭಿಪ್ರಾಯ ಇತ್ತು. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಪ್ರಚಾರ ನಡೆಸಿದ್ದರು. ಎಸ್‌ಡಿಪಿಐ ಮತ್ತು ಎಡ ಪಕ್ಷಗಳು ಸ್ಪರ್ಧಿಸದ ಕಾರಣ ಅಲ್ಪಸಂಖ್ಯಾತರ ಹಾಗೂ ಜಾತ್ಯಾತೀತ ಮತಗಳು ಒಡೆಯುವ ಪ್ರಮೇಯವೂ ಇರಲಿಲ್ಲ. ಹಾಗಾಗಿ ಕಾಂಗ್ರೆಸ್ ಪಾಳಯದಲ್ಲಿ ಗೆಲುವಿನ ನಿರೀಕ್ಷೆ ಇತ್ತು. ಆದರೆ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಮತದಾನ ಮತ್ತು ಮೋದಿ ಅಲೆಯಿಂದ ನಿರೀಕ್ಷೆ ಹುಸಿಯಾಯಿತು.
* ಚಿಂತನ-ಮಂಥನ
ಸೋಲಿಗೆ ಕಾಂಗ್ರೆಸ್‌ನಲ್ಲಿ ಚಿಂತನ-ಮಂಥನ ನಡೆದಿದೆ. ದ.ಕ. ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಕೆಪಿಸಿಸಿಗೆ ಮೊದಲೇ ಸುಳಿವು ದೊರೆತಿತ್ತು ಎನ್ನುವ ಮಾಹಿತಿ ಇದೆ. ಕೆಪಿಸಿಸಿ ಸೂಚನೆ ನೀಡಿದರೂ ಕರಾವಳಿಯ ಕೆಲವು ನಾಯಕರು ಪ್ರಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನುವ ಆರೋಪವೂ ಇದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಮತ ಬ್ಯಾಂಕ್ ಗಟ್ಟಿ ಮಾಡಲು ಪ್ರಯತ್ನ ನಡೆಸಿದ್ದರೆ, ಬಿಜೆಪಿ ಎಂದಿನಂತೆ ಹಿಂದೂ ಮತಗಳನ್ನು ಕ್ರೋಡೀಕರಿಸಲು ಯಶಸ್ವಿಯಾಗಿದೆ.

*ಜಾತ್ಯಾತೀತ ಪಕ್ಷಗಳು ಈ ಬಾರಿ ಸ್ಪರ್ಧೆ ಮಾಡದೇ ಇದ್ದರೂ ಅದರ ಲಾಭ ಪಡೆಯಲು ಕಾಂಗ್ರೆಸ್ ಯಶಸ್ವಿಯಾಗಿಲ್ಲ.
ಹಾಗೆಂದು ಪಕ್ಷದ ಕಾರ್ಯಕರ್ತರು ಸಾಕಷ್ಟು ಕೆಲಸ ಮಾಡಿದ್ದಾರೆ. ಯಾಕೆ ಸೋಲಾಗುತ್ತಿದೆ ಎಂದು ಗಂಭೀರ ಚಿಂತನೆ ನಡೆಸಬೇಕಾಗಿದೆ. ನಾಯಕತ್ವ, ಚುನಾವಣೆಯ ನಿರ್ವಹಣೆ ಸಹಿತ ಎಲ್ಲ ವಿಷಯಗಳ ಪರಾಮರ್ಶೆ ನಡೆಸುವ ಅಗತ್ಯವಿದೆ.
-ಶಾಹುಲ್ ಹಮೀದ್, ಅಧ್ಯಕ್ಷರು, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ

* ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡುವಲ್ಲಿಯೂ ವಿಫಲರಾಗಿದ್ದೇವೆ. ಪಕ್ಷದ ಕಾರ್ಯವೈಖರಿ ಬದಲಾಗಬೇಕಾಗಿದೆ. ಪಕ್ಷ ಜನತೆಗೆ ಇನ್ನಷ್ಟು ನಿಕಟವಾಗಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕ್ರಮಳನ್ನು ರೂಪಿಸಬೇಕು. ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಸಂಘಟನೆ ಇನ್ನಷ್ಟು ಸಕ್ರಿಯವಾಗಬೇಕು.
-ನವೀನ್ ಡಿಸೋಜಾ, ಸಂಯೋಜಕರು, ಕೆಪಿಸಿಸಿ
---ಬಾಕ್ಸ್--
ಕಾಂಗ್ರೆಸ್ ಸೋಲಿನ ಅಂತರ
1991-35,005
1996-14,499
1998-6,907
1999-8,469
2004-33,415
2009-40,420
2014-1,43,709
2019-2,74,621
2023-1,49,208

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net