

ವಿಜಯವಾಣಿ ಸುದ್ದಿಜಾಲ ಬೈಂದೂರು
ಜಗತ್ತಿನ ಅತ್ಯಂತ ಪ್ರಬಲ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ, ಅವಹೇಳನಕಾರಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಕೂಡಲೇ ಹೇಳಿಕೆ ಹಿಂಪಡೆದು, ಜನತೆಯ ಕ್ಷಮೆ ಕೇಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರನ್ನು ವಿಶ್ವವೇ ಗೌರವಿಸುತ್ತಿದೆ. ಆದರೆ ಕಾಂಗ್ರೆಸ್ ನಾಯಕರಿಗೆ ಪ್ರಧಾನಿಯನ್ನು ಗೌರವಿಸಬೇಕೆಂಬ ಪ್ರಜ್ಞೆಯೂ ಇಲ್ಲ. ಮೋದಿ ಕರ್ನಾಟಕ ಕುರಿತು ವ್ಯಕ್ತಪಡಿಸಿದ ಕಳವಳ ಸೂಕ್ತವಿದೆ. ಇದನ್ನು ಸ್ವೀಕರಿಸುವುದು ಬಿಟ್ಟು ಸಿದ್ದರಾಮಯ್ಯ ಅವಹೇಳನಕಾರಿ ಪದವನ್ನು ಪ್ರಧಾನಿ ವಿರುದ್ಧ ಬಳಸಿದ್ದು ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯುಷ್ಮಾನ್ ಭಾರತ, ಜನೌಷಧ, ಆವಾಸ್ ಯೋಜನಾ, ಉಚಿತ ರೇಷನ್, ಉಜ್ವಲಾ ಯೋಜನೆಯಂತಹ ಹಲವು ಕಾರ್ಯಕ್ರಮಗಳ ಮೂಲಕ ಜನರ ಬದುಕಿನ ಮೇಲೆ ಮೋದಿ ಸರ್ಕಾರ ಧನಾತ್ಮಕ ಪ್ರಭಾವ ಬೀರಿದ್ದು, ಕಾಂಗ್ರೆಸಿಗರಿಗೆ ಅಧಿಕಾರ ಶಾಶ್ವತವಾಗಿ ದೊರೆಯುವುದಿಲ್ಲ ಎಂಬ ಭಯದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದಲ್ಲಿ ಆರ್ಥಿಕ ಬಲ ಇಲ್ಲವಾಗಿದ್ದು, ಸರ್ಕಾರಿ ಉದ್ಯೋಗಿಗಳಿಗೆ ವೇತನಗಳಿಲ್ಲದೆ ಅನೇಕ ತಿಂಗಳು ಕಳೆದಿವೆ ಎಂದೂ ರಾಘವೇಂದ್ರ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಹೊಣೆಗೇಡಿ ಮತ್ತು ಹಗುರ ಮಾತಿನ ಮೂಲಕ ಹತಾಶೆ ಹೊರಹಾಕಿದ್ದಾರೆ. ಈ ನೆಲದ ಕ್ರಾಂತಿಪುರುಷ, ಬಸವಣ್ಣ ಬಗ್ಗೆ ಅಪಾರ ಗೌರವವಿದೆ ಎಂದು ಮುಖ್ಯಮಂತ್ರಿಗಳು ಸದಾ ಹೇಳುತ್ತಾರೆ. ಆದರೆ ಅವರ ಹೇಳಿಕೆಗಳು ಭಾಷಣಕ್ಕಷ್ಟೇ ಸೀಮಿತ, ಕಾರ್ಯರೂಪಕ್ಕೆ ಬಂದಿಲ್ಲ. - ಬಿ. ವೈ.ರಾಘವೇಂದ್ರ, ಸಂಸದ https://www.vijayavani.net/request-for-completion-of-port-works https://www.vijayavani.net/kindi-dams-languishing