

ಮಂಡ್ಯ: ವಿಧಾನಸಭೆ ಕಲಾಪ ಗಮನಿಸಿದರೆ ಜೆಡಿಎಸ್ ಕೋಮುವಾದಿ ಬಿಜೆಪಿಯೊಂದಿಗೆ ಲೀನವಾಗಿರುವುದು ಸ್ಪಷ್ಟವಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಪಕ್ಷ ವಿಸರ್ಜನೆ ಮಾಡುವ ಮೂಲಕ ಜನರಿಗೆ ಉಪಕಾರ ಮಾಡಬೇಕೆಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ವ್ಯಂಗ್ಯವಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ವಿರುದ್ಧ ರಾಜಕೀಯ ಸೇಡು ಪ್ರದರ್ಶನ ಮಾಡುತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪಕ್ಷದ ಮಾಜಿ ಶಾಸಕರ ನಡೆ ಅತ್ಯಂತ ಖಂಡನಾರ್ಹ. ಚಲುವರಾಯಸ್ವಾಮಿ ಅವರ ವಿರುದ್ಧ ಎಚ್ಡಿಕೆ, ಸುರೇಶ್ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಅನ್ನದಾನಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ ನಾಯಕರ ವರ್ತನೆ ನೋಡಿದರೆ ಬಿಜೆಪಿಯ ಒಂದು ಘಟಕದಂತೆ ಕಾಣುತ್ತಿದೆ. ಆದ್ದರಿಂದ ಈ ಬಗ್ಗೆ ರಾಜ್ಯದ ಜನರಿಗೆ ಸ್ಪಷ್ಟತೆ ನೀಡಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ನಾಗಮಂಗಲ ಕೆಎಸ್ಆರ್ಟಿಸಿ ಘಟಕದ ಚಾಲಕ ಕಂ ನಿರ್ವಾಹಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಲು ಆತನ ವೈಯಕ್ತಿಕ ವಿಷಯಗಳೇ ಕಾರಣವೆಂದು ಸದನದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಸುಖಾಸುಮ್ಮನೆ ಜೆಡಿಎಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಘಟನೆ ನಡೆದ ದಿನ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾಜಿ ಶಾಸಕ ಸುರೇಶ್ಗೌಡ ಆಂಬುಲೆನ್ಸ್ ತಡೆಯುವ ಯತ್ನ ನಡೆಸಿದ್ದು ಖಂಡನೀಯ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ಸಂಬಂಧ ಗೃಹಸಚಿವರು ಕೂಡ ತಿಳಿಸಿದ್ದಾರೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಜಬೀವುಲ್ಲಾಖಾನ್, ಕೃಷ್ಣ, ಗೊರವಾಲೆ ಚಂದ್ರಶೇಖರ್, ಮಹೇಶ್, ಶಂಕುತಲಾ ಇದ್ದರು.