ಮಾಜಿ ಸಿಎಂಗೆ ಜಿಲ್ಲೆಯಲ್ಲಿ ಮತ ಕೇಳುವ ನೈತಿಕತೆ ಇದೆಯೇ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಪ್ರಶ್ನೆ?

Congress criticizes Hdk mandya
Published on

ಮಂಡ್ಯ: ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಕೊಡುಗೆ ನೀಡದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಹಕ್ಕಿದೆಯೇ ಎಂದು ಮೈಷುಗರ್ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಪ್ರಶ್ನಿಸಿದರು.

2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎಚ್ಡಿಕೆ, ಜಿಲ್ಲೆಯ ಅಭಿವೃದ್ಧಿಗಾಗಿ 8,500 ಕೋಟಿ ರೂ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ ಬಿಡಿಗಾಸನ್ನೂ ಕೊಡದೇ ಮಾತು ತಪ್ಪಿದ ಅವರಿಗೆ ಜಿಲ್ಲೆಯ ಜನರ ಮತ ಕೇಳಲು ಯಾವ ನೈತಿಕತೆ ಎಲ್ಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ನಮ್ಮ ಕಾಂಗ್ರೆಸ್ ಸರ್ಕಾರ ಮಾತು ಕೊಟ್ಟಂತೆ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ. ನಮ್ಮ ಸಾಧನೆಯ ಆಧಾರದ ಮೇಲೆ ಮತ ನೀಡುವಂತೆ ಜನರಿಗೆ ವಿನಂತಿಸುತ್ತಿದ್ದೇವೆ. ಆದರೆ ಮೈತ್ರಿ ಅಭ್ಯರ್ಥಿ ಯಾವ ಆಧಾರದ ಮೇಲೆ ಮತ ಕೇಳುತ್ತಾರೆ. 2004ರಲ್ಲಿ ಅತಂತ್ರ ವಿಧಾನ ಸಭೆ ನಿರ್ಮಾಣವಾದಾಗ 2ನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ವಂಚಿಸಿದವರು, ಜಿಲ್ಲೆಯಲ್ಲಿ ಮತಯಾಚಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕಿಡಿಕಾರಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪುತ್ರನ ಸೋಲಿನ ನಂತರ ಕಾವೇರಿ ಕೊಳ್ಳದ ರೈತರು ನೀರಿಗಾಗಿ ಮನವಿ ಮಾಡಿದರೆ ದೆಹಲಿಯಲ್ಲಿ ಕೀಲಿಕೈ ಇದೆ, ನೀವು ಅಲ್ಲಿಯೇ ನೀರನ್ನು ಬಿಡಿಸಿಕೊಳ್ಳಬೇಕು ಎಂದವರಿಗೆ ಮಂಡ್ಯ ಜಿಲ್ಲೆಯ ಮತದಾರರು ಮತ ಹಾಕಬೇಕೇ?. ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಅಧಿಕಾರವಿದ್ದ ವೇಳೆ 40 ತಿಂಗಳು ಸಾಮಾನ್ಯ ಸಭೆಯನ್ನೂ ನಡೆಸಲಿಲ್ಲ. ಇದರೊಂದಿಗೆ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದ್ದರು ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದ ವೇಳೆ ರಾಜ್ಯದಲ್ಲಿ ಕೃಷಿ ಕಾಯ್ದೆ ಪರವಾಗಿ ಬೆಂಬಲ ನೀಡಿದವರಿಗೆ ಮತ ಹಾಕಬೇಕೇ?. ಇಂತಹ ಅಭ್ಯರ್ಥಿಯನ್ನು ತಿರಸ್ಕರಿಸಿ, ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಬೆಂಬಲಿಸುವ ಮೂಲಕ ಜಿಲ್ಲೆಯ ಮಣ್ಣಿನ ಮಗ ವೆಂಕಟರಮಣೇಗೌಡ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ ಗಂಗಾಧರ, ಕಾಂಗ್ರೆಸ್ ಪಕ್ಷ ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ ನೀಡುವುದು ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಎಲ್ಲ ಯೋಜನೆಗಳು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಕೆ.ಎಚ್. ನಾಗರಾಜು, ರಾಮಕೃಷ್ಣ, ಮುಜಾಹಿದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net